ರಸ್ತೆ ಅಪಘಾತದಲ್ಲಿ ಎರಡು ಲಾರಿಗಳು ಸುಟ್ಟು ಭಸ್ಮ: ಮೂವರು ಸಜೀವ ದಹನವಾಗಿರುವ ಶಂಕೆ

ಕಲಬುರಗಿ: ಶಹಾಬಾದ ತಾಲೂಕು ತೊನಸನಳ್ಳಿ ಗ್ರಾಮದ ಬಳಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಹೊತ್ತಿ ಊರಿಯುತ್ತಿದ್ದು, ಮೂವರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.
ಸಕ್ಕರೆ ಚೀಲ ತುಂಬಿದ ಲಾರಿ ಹಾಗೂ ಲಿಕ್ಕರ್ ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶಹಾಬಾದ-ಜೇವರ್ಗಿ ನಡುವಿನ ಮುಖ್ಯ ರಸ್ತೆಯಲ್ಲಿರುವ ತೊನಸನಳ್ಳಿ ಗ್ರಾಮದ ಬಳಿ ಎರಡು ಲಾರಿಗಳು ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಮಾರು ಎರಡು ಗಂಟೆಯಿಂದ ಎರಡು ಲಾರಿಗಳು ಬೆಂಕಿಯಿಂದ ಧಗಧಗಿಸುತ್ತಿವೆ. ಚಿತಾಪುರ ಹಾಗೂ ಜೇವರ್ಗಿಯಿಂದ ಆಗಮಿಸಿದ ಎರಡು ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಎರಡು ಲಾರಿಯ ಚಾಲಕರು ಸೇರಿ ಒಟ್ಟು ಮೂರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಒಂದು ಮೃತದೇಹ ಪತ್ತೆಯಾಗಿದ್ದು, ಇನ್ನೂ ಎರಡು ಮೃತದೇಹಗಳು ಇವೆ ಎನ್ನಲಾಗುತ್ತಿದೆ. ಸದ್ಯ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸ್ಥಳದಲ್ಲಿ ಸಾರ್ವಜನಿಕರು ಗುಂಪು ಸೇರಿದ್ದು, ಶಹಾಬಾದ್ ಪೊಲೀಸರು ಸಾರ್ವಜನಿಕರನ್ನು ಚದುರಿಸುತ್ತಿದ್ದಾರೆ.



