Latestಜಿಲ್ಲಾ ಸುದ್ದಿಮೆಟ್ರೋರಾಜ್ಯಸಾಹಿತ್ಯ / ಸಂಸ್ಕೃತಿಸುದ್ದಿ

ಯಾವುದೇ ಕೃತಿಯ ಬಿಡುಗಡೆ ಚೊಚ್ಚಲ ಹೆರಿಗೆಗೆ ಸಮ: ಹಂಪ ನಾಗರಾಜಯ್ಯ

ಬೆಂಗಳೂರು ,ಜನವರಿ 7-ಜಾಗತೀಕರಣದ ಈ ಸಂದರ್ಭದಲ್ಲಿ ನಮಗೆ ಲಭ್ಯವಿರುವ ಇಂದಿನ ಆಧುನಿಕ ಮಾಧ್ಯಮಗಳನ್ನು ಯುವ ಲೇಖಕರು ತಮ್ಮ ಪ್ರತಿಭೆಯ ವಿಕಾಸಕ್ಕೆ ಬಳಸಿಕೊಳ್ಳಬೇಕು ಎಂದು ಕನ್ನಡದ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಹೇಳಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ 55 ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಒಂದು ಕೃತಿಯ ಬಿಡುಗಡೆ ಚೊಚ್ಚಲ ಹೆರಿಗೆಗೆ ಸಮಾನ, ಏಕೆಂದರೆ ಆ  ಕೃತಿಯ ಬರಹಗಾರ ತನ್ನ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅಂತಹುದೇ ಉದ್ವೇಗ, ತವಕ ಅನುಭವಿಸುತ್ತಾನೆ ಎಂದರು. ಶಾಲಾ-ಕಾಲೇಜುಗಳಿಗೆ ಉಚಿತವಾಗಿ ಪುಸ್ತಕ ಹಂಚುವ ಯೋಜನೆ ಅತ್ಯಂತ ಪ್ರಶಂಸನೀಯ. ಇದು ಮಕ್ಕಳಲ್ಲಿ ಓದುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ , ಪುಸ್ತಕ ದಾನದ ಮೂಲಕ ಜ್ಞಾನದಾನ ಮಾಡುವುದು ನಿಜಕ್ಕೂ ಬಹುದೊಡ್ಡ ಸಂಗತಿ. ಅದರ ಮೂಲಕ ನಾವು ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯಅತಿಥಿಯಾಗಿದ್ದ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಬರಹಗಾರ ಬದುಕಿನ ಕಟ್ಟಳೆಗಳಿಂದ ಹೊರಗೆ ಬಂದು ಬರೆಯಬೇಕು ಬದುಕಿನ ಕಟ್ಟಳೆಗಳನ್ನು ಮುರಿದು ಬರೆದರೆ ಮಾತ್ರ ಅದು ಅನುಭವದ್ರವ್ಯ ವಾಗುತ್ತದೆ , ಕಟ್ಟಲೆಗಳು ಸೃಜನಶೀಲತೆಯನ್ನು ಕಟ್ಟಿಹಾಕುತ್ತದವೆ ಎಂದರು.

ಬದುಕಿದ್ದನ್ನು ಬರೆಯಿರಿ

ಯುವ ಬರಹಗಾರರ ಚೊಚ್ಚಲ ಕೃತಿಯ ಬಿಡುಗಡೆ ಆಯಾ ಬರಹಗಾರರಿಗೆ ಎಂದೂ ಅವಿಸ್ಮರಣೀಯ, ಏಕೆಂದರೆ ,ಬದುಕಿನಲ್ಲಿ ಮೊದಲ ಮುತ್ತು, ಮೊದಲ ಅನುಭವ, ಮೊದಲ ಪುಸ್ತಕ ಕೊಡುವ ಸುಖ ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ .ಹಾಗಾಗಿ ಪ್ರತಿ ಲೇಖಕನಿಗೆ ಅವರ ಮೊದಲ ಪುಸ್ತಕದ ಬಿಡುಗಡೆ ಬದುಕಿನ ಅವಿಸ್ಮರಣೀಯ ಸಂದರ್ಭ. ಬರೆಯುವುದಕ್ಕಾಗಿ ಬದುಕಬೇಡಿ, ಬದುಕಿದ್ದನ್ನು ಬರೆಯಿರಿ ಎಂದ ಅವರು ಸಹಬಾಳ್ವೆ ಮತ್ತು ಸಮಾನ ಮನಸ್ಸು ಇದ್ದಾಗ ಮಾತ್ರ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ, ಅವರು ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಕೆಲಸವನ್ನು ಅತ್ಯಂತ ಪಾರದರ್ಶಕವಾಗಿ ಮಾಡಬೇಕು ಎಂದು ಆಯ್ಕೆ ಸಮಿತಿಯನ್ನು ರಚಿಸಿ ,ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಬರಹಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

2020 ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ಬಂದ ಅರ್ಜಿಗಳು 221, ಅವುಗಳಲ್ಲಿ 135 ಕವನಸಂಕಲನಗಳು.ಇದು  ಇಂದಿನ ಯುವಜನರು ಹೆಚ್ಚಾಗಿ ಕಾವ್ಯದ ಕಡೆ ಆಕರ್ಷಿತರಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ, ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಕಡೆ ಕೂಡ ಇಂದಿನ ಯುವಜನತೆ ಆಸಕ್ತಿ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಯ ಸುಮಾರು 250 ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಯುವ ಬರಹಗಾರರಿಗೆ ಕಾರ್ಯಕ್ರಮದ ಸ್ಮರಣಾರ್ಥ ಸ್ಮರಣ ಫಲಕ ನೀಡಲಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button