
ಬೆಂಗಳೂರು: ದೇವಾಲಯಗಳಿಗೆ ಸ್ವತಂತ್ರ ನೀಡುವ ಚಿಂತನೆ ಬಿಜೆಪಿಯಿಂದ ಬಹುಸಂಖ್ಯಾತ ಹಿಂದೂ ಸಮಾಜದ ಮೇಲೆ ಸಾರಿರುವ ಸಮರವಾಗಿದೆ. ಈಗ ಸರ್ಕಾರ ಮಾಡ ಹೊರಟಿರುವುದು ನಾಡಿನ ಐದೂವರೆ ಕೋಟಿ ಕನ್ನಡಿಗ ಹಿಂದೂಗಳ ಅಧಿಕಾರವನ್ನು ತಪ್ಪಿಸಿ ಕೇವಲ ಶೇ.ಎರಡರಷ್ಟು ಜನರ ಕೈಗೆ ಕೊಡಲು ಮುಂದಾಗಿದ್ದಾರೆ ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರವು ರಾಜ್ಯದ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವುದಾಗಿ ಹೇಳುತ್ತಿದೆ. ದೇವಸ್ಥಾನಗಳು ಈಗಲೂ ಸ್ವತಂತ್ರವಾಗಿಯೆ ಇವೆ. ಸರ್ಕಾರ ಅನೇಕ ದೇವಸ್ಥಾನಗಳಿಗೆ ನೆರವು ನೀಡುವುದರ ಮೂಲಕ ಅವುಗಳನ್ನು ಪೊರೆಯುತ್ತಿದೆ. ಮುಜರಾಯಿ ಇಲಾಖೆಯ ವಾರ್ಷಿಕ ಬಜೆಟ್ಟು ಸುಮಾರು 350 ಕೋಟಿಗಳಷ್ಟಿದೆ ಎಂದರು.
ಸರ್ಕಾರದ ಈ ನಿರ್ಧಾರದಿಂದ ಶೇ. 50ರಷ್ಟು ಜನ ಮತ್ತೆ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಅನುಭವಿಸಬೇಕೆಂದು ಸರ್ಕಾರ ತೀರ್ಮಾನಿಸಿದಂತೆ ಕಾಣುತ್ತಿದೆ. ಬಸವಣ್ಣನವರ ನೇತೃತ್ವದ ಶರಣ ಚಳುವಳಿಯನ್ನು ದಮನ ಮಾಡಿದ ಪುರೋಹಿತಶಾಹಿ ಶಕ್ತಿಗಳೆ ಇಂದು ತಮ್ಮ ಬಿಜೆಪಿ ಪಕ್ಷದಲ್ಲಿರುವ ಶೂದ್ರ ರಾಜಕಾರಣಿಗಳನ್ನು ಬಳಸಿಕೊಂಡು ದೇವಸ್ಥಾನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಐದೂವರೆ ಕೋಟಿ ಕನ್ನಡಿಗ ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯ ಕಡೆಗೆ ತಳ್ಳಲು ಪ್ರಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪುರೋಹಿತ ಶಾಹಿ ವರ್ಗ ಸ್ವಾಯತ್ತತೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಲಕ್ಷಾಂತರ, ಕೋಟ್ಯಾಂತರ ಆದಾಯವಿರುವ ದೇವಸ್ಥಾನಗಳನ್ನು ತಾವು ತೆಗೆದುಕೊಂಡು ಆದಾಯವಿಲ್ಲದ ಕೆಲವು ದೇವಸ್ಥಾನಗಳನ್ನು ಉಳಿದವರಿಗೆ ಬಿಟ್ಟುಕೊಡಬಹುದು ಎಂದು ಹೇಳಿದ್ದಾರೆ. ಆದರೆ ಸರ್ಕಾರದ ಹಿಡಿತ ತಪ್ಪಿದ ಕೂಡಲೆ ಮನುವಾದಿ ನಿಯಮಗಳನ್ನು ಸಮಾಜದ ಮೇಲೆ ಹೇರಿಕೆ ಮಾಡಲು ಪ್ರಾರಂಭಿಸುತ್ತಾರೆ. ಈ ವಿಚಾರಗಳನ್ನು ಹೇಳಿದ ಕೂಡಲೆ ಸಂಘ ಪರಿವಾರದವರು ಇನ್ನಿಲ್ಲದಂತೆ ತೊಳಲಾಡುತ್ತಾರೆ ಎಂದರು.
ತಾವು ಮಾತನಾಡಲಾರದೆ ತಮ್ಮ ಪಕ್ಷದಲ್ಲಿರುವ ಶೂದ್ರಾದಿ ದಲಿತ ನಾಯಕರನ್ನು ಛೂ ಬಿಟ್ಟು ಬಾಯಿಗೆ ಬಂದಂತೆ ಮಾತನಾಡಲು ಸೂಚಿಸುತ್ತಾರೆ. ಈ ಧಾರ್ಮಿಕ ಅನ್ಯಾಯಗಳ ವಿರುದ್ಧ, ಶೋಷಣೆಯ ನೀತಿಗಳ ವಿರುದ್ಧ ಮಾತನಾಡಿದರೆ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳ ಬಗ್ಗೆ ಪ್ರಸ್ತಾಪಿಸಿದ ಕೂಡಲೆ ಹಾಗೆ ಪ್ರಸ್ತಾಪಿಸಿದವರನ್ನ ಹಿಂದೂ ವಿರೋಧ, ಪಾಕಿಸ್ತಾನ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ವಿಷಯಗಳನ್ನು ಮಾತನಾಡಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದರು.
ಇದು ಮನುವಾದಿಗಳ ಪುರಾತನ ಅಜೆಂಡ. ಹಾಗಾಗಿ ಜನರು ಇವರ ದುಷ್ಟ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮ, ದೇವರು, ದೇವಸ್ಥಾನ, ಮಸೀದಿ, ಚರ್ಚುಗಳ ವಿಷಯದಲ್ಲಿ ರಾಜಕೀಯ ಮಾಡಿಕೊಂಡು ದೇಶವನ್ನು ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಒತ್ತೆ ಇಡುತ್ತಿರುವ ಬಿಜೆಪಿಯು ಆರಂಭದಿಂದಲೂ ಸುಳ್ಳುಗಳ ಫ್ಯಾಕ್ಟರಿ ಇಟ್ಟುಕೊಂಡು ಸುಳ್ಳುಗಳನ್ನೆ ಉತ್ಪಾದಿಸಿ ಜನರಿಗೆ ಮಾರಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.



