
ಧರ್ಮಶಾಲಾ: ಭರ್ಜರಿ ಫಾರ್ಮ್ ನಲ್ಲಿರುವ ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಅಯ್ಯರ್ ಬಾರಿಸಿದ ಅರ್ಧಶತಕದ ಬಲದಿಂದ ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಆರು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಮೂಲಕ ಟಿ-20 ಕ್ರಿಕೆಟ್ ನಲ್ಲಿ ಅಜೇಯ 12 ಪಂದ್ಯಗಳ ವಿಶ್ವದಾಖಲೆಯನ್ನು ರೋಹಿತ್ ಪಡೆ ಸರಿಗಟ್ಟಿದೆ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ಗೆ 146 ರನ್ ಸೇರಿಸಿತು. ಗುರಿಯನ್ನು ಹಿಂಬಾಲಿಸಿದ ಭಾರತ ತಂಡ 16.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿ ಗೆಲುವು ದಾಖಲಿಸಿತು.
ಟೂರ್ನಿಯಲ್ಲಿ ಸೊಗಸಾದ ಲಯದಲ್ಲಿರುವ ಶ್ರೇಯಸ್ ಅಯ್ಯರ್ ಮೂರನೇ ಬಾರಿಗೆ 50ಕ್ಕೂ ಹೆಚ್ಚು ರನ್ ಸಿಡಿಸಿ ಮಿಂಚಿದರು. ಮೂರನೇ ಪಂದ್ಯದಲ್ಲೂ ಶ್ರೇಯಸ್ 45 ಎಸೆತಗಳಲ್ಲಿ ಅಜೇಯ 73 ರನ್ ಕಲೆ ಹಾಕಿದರು. ಇವರ ಇನ್ನಿಂಗ್ಸ್ ನಲ್ಲಿ 9 ಬೌಂಡರಿ, 1 ಸಿಕ್ಸರ್ ಸೇರಿವೆ.
ದೀಪಕ್ ಹೂಡಾ 21, ರೋಹಿತ್ ಶರ್ಮಾ 18, ರವೀಂದ್ರ ಜಡೇಜಾ ಅಜೇಯ 22 ರನ್ ಬಾರಿಸಿ ಮಿಂಚಿದರು. ಲಂಕಾ ಪರ ಲಹಿರು ಕುಮಾರ ಎರಡು ವಿಕೆಟ್ ಪಡೆದರು.
ಶ್ರೀಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಲಂಕಾ 29 ರನ್ ಆಗುವಷ್ಟರಲ್ಲಿ ನಾಲ್ಕು ಪ್ರಮುಖ ಪಾತ್ರವನ್ನು ಕಳೆದುಕೊಂಡಿತು. ವಿಕೆಟ್ ಕೀಪರ್ ದಿನೇಶ್ ಚಂಡೀಮಲ್ 22 ರನ್ ಬಾರಿಸಿ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಐದನೇ ವಿಕೆಟ್ ಗೆ ದಸನು ಶನಕ ಹಾಗೂ ಚಮಿಕ ಕರುಣರತ್ನೆ ಸೊಗಸಾದ ಜೊತೆಯಾಟವನ್ನು ಆಡಿ ತಂಡಕ್ಕೆ ಆಧಾರವಾದರು. ಈ ಜೋಡಿ 47 ಎಸೆತಗಳಲ್ಲಿ ಅಜೇಯ 86 ರನ್ ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ದಸನು 38 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 74 ರನ್ ಚಚ್ಚಿದರು.
ಭಾರತದ ಪರ ಆವೀಶ್ ಖಾನ 2, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಕಬಳಿಸಿದರು.



