Breaking NewsLatestಬೆಳಗಾವಿರಾಜಕೀಯರಾಜ್ಯ

ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ ಎಂಇಎಸ್ ಗಲಾಟೆ, ಬೈರತಿ ರಾಜಿನಾಮೆ ಕೋಲಾಹಲ

ಬೆಳಗಾವಿ: ಎಂ.ಇ.ಎಸ್ ಹಾಗೂ ಶಿವಸೇನೆ ಕಾರ್ಯಕರ್ತ ಪುಂಡಾಟಿಕೆ ವಿರುದ್ಧ ಹಾಗೂ ಸಚಿವ ಬೈರತಿ ಬಸವರಾಜು ವಿರುದ್ಧ ಭೂಕಬಳಿಕೆ ಆರೋಪ ಪ್ರತಿಧ್ವನಿಸಿ ಗದ್ದಲ, ಕೋಲಾಹಲ ಏರ್ಪಟ್ಟ ಪರಿಣಾಮ ಸದನದ ಕಲಾಪವನ್ನು ಮೂಂದೂಡಿದ ಪ್ರಸಂಗ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ನಡೆಯಿತು.

ವಿಧಾನಸಭೆಯಲ್ಲಿ ಬೆಳಗ್ಗೆ ಹನ್ನೊಂದೂವರೆಗೆ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು. ನಂತರ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ವ್ಯಕ್ತಿಯೊಬ್ಬರಿಂದ ನಕಲಿ ದಾಖಲೆ ಹಾಗೂ ಖಾಲಿ ಕಾಗದಕ್ಕೆ ಸಹಿಹಾಕಿಸಿಕೊಂಡು ಕಾನೂನು ಬಾಹಿರವಾಗಿ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ, ಕೂಡಲೇ ಅವರ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಮತ್ತು ಘೋಷಣೆಗಳನ್ನು ಕೂಗಿ ಧರಣಿ ನಡೆಸಲಾರಂಭಿಸಿದರು.

ಇದೇ ವೇಳೆ ಜೆಡಿಎಸ್ ಸದಸ್ಯರು ಎಂಇಎಸ್ ಪುಂಡರಿಂದ ಕನ್ನಡಿಗರಿಗೆ ಅಪಮಾನವಾಗಿದೆ ಎಂದು ಆರೋಪಿಸಿ, ಕನ್ನಡ ಧ್ವಜದ ಶಾಲನ್ನು ಕೊರಳಿಗೆ ಹಾಕಿಕೊಂಡು ಘೋಷಣೆ ಕೂಗಿದರು. ಇದರ ನಡುವೆಯೇ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸದನ, ನಿಯಮಾವಳಿಗಳ ಪ್ರಕಾರ ನಡೆಯುತ್ತಿಲ್ಲ. ನಿಯಮ 60ರಡಿ ಭೂಕಬಳಿಕೆ ಆರೋಪ ಹೊತ್ತಿರುವ ಭೈರತಿ ಬಸವರಾಜ್ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕನ್ನಡ ತಾಯಿ ಭುವನೇಶ್ವರಿಗೆ ಅವಮಾನ ಆಗಿದೆ. ಎಲ್ಲವನ್ನೂ ಬದಿಗೊತ್ತಿ ಮೊದಲು ಗಡಿಯೊಳಗಿನ ಎಂಇಎಸ್ ಪುಂಡಾಟಿಕೆ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆದರೆ ಸಿದ್ದರಾಮಯ್ಯ, ಬೈರತಿ ಬಸವರಾಜ್ ಬಗ್ಗೆ ಚರ್ಚಿಸೋಣ, ನಂತರ ಎಂಇಎಸ್ ಪುಂಡಾಟಿಕೆ ಬಗ್ಗೆ ಮಾತನಾಡೋಣ ಎಂದು ಜೆಡಿಎಸ್ ಸದಸ್ಯರಿಗೆ ಮಾಡಿದ ಮನವಿ ಪ್ರಯೋಜನವಾಗಲಿಲ್ಲ.

ಈ ವೇಳೆ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಧರಣಿ ನಿರತ ಕಾಂಗ್ರೆಸ್ ಸದಸ್ಯರು ತಮ್ಮ ಜಾಗಕ್ಕೆ ಹೋಗಿ ಕುಳಿತರೆ, ಸದನ ನಿಯಮಾವಳಿ ಪ್ರಕಾರ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದರು. ಒಂದೆಡೆ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್ ಶಾಸಕರು, ತಮ್ಮ ಜಾಗದಲ್ಲಿ ನಿಂತು ಘೋಷಣೆ ಕೂಗ ತೊಡಗಿದರು.

ಈ ಹಂತದಲ್ಲಿ ಎದ್ದುನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಸದನ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪ ನಡೆಸಬೇಕು ಎಂದು ನಡೆಯಬೇಕು ಎಂದು ನಿಯಮ ಮಾಡಿಕೊಂಡಿದ್ದೇವೆ. ಆ ಪ್ರಕಾರ ಸದನದ ಕಲಾಪ ನಡೆಯಲಿ ಎಂದು ಸ್ಪೀಕರ್ ಕಾಗೇರಿ ಅವರಿಗೆ ಮನವಿ ಮಾಡಿದರು.

ಇದೇ ವೇಳೆ, ಕಾಂಗ್ರೆಸ್ ಸದಸ್ಯರು ಚರ್ಚೆ ಬದಲು ಧರಣಿ ಮಾಡಬೇಕೆಂದೇ ಸದಕ್ಕೆ ಬಂದಿದ್ದಾರೆ. ಇದೊಂದು ಬೇಜವಾಬ್ದಾರಿ ವಿರೋಧ ಪಕ್ಷ ಎಂದು ಕುಟುಕಿದರು. ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸಚಿವ ಭೈರತಿ ಬಸವರಾಜು ವಿರುದ್ಧದ ಆರೋಪ ಕುರಿತ ಚರ್ಚಿಗೆ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲ, ಕೋಲಾಹಲ ಏರ್ಪಟ್ಟು ಸದನದ ಸುಗಮ ಕಲಾಪಕ್ಕೆ ತೀವ್ರ ಅಡ್ಡಿಯುಂಟಾದ ಪರಿಣಾಮ ಸ್ಪೀಕರ್ ಕಾಗೇರಿ ಕಲಾಪವನ್ನು ಮಧ್ಯಾಹ್ನ ಎರಡೂವರೆಗೆ ಮುಂದೂಡಿದರು.

ಗದ್ದಲದ ನಡುವೆ ಮೇಲ್ಮನೆ ಕಲಾಪ
ಹೆಚ್ಚುಕಡಿಮೆ ಇದೇ ಪರಿಸ್ಥಿತಿ ವಿಧಾನಪರಿಷತ್ ನಲ್ಲೂ ಇತ್ತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಬೈರತಿ ಬಸವರಾಜು ಅವರ ರಾಜಿನಾಮೆಗೆ ಒತ್ತಾಯಿಸಿದ, ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಎದುರಿನ ಬಾವಿಗೆ ಬಂದು ಧರಣಿ ನಡೆಸಲಾರಂಭಿಸಿದರು.

ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಸಭಾಪತಿ ಬಸವರಾಜ ಹೊರಟ್ಟಿ, ನಿಯಮದಂತೆ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಟ್ಟರು. ಈ ಮಧ್ಯೆ ನಡೆದ ಸಂಧಾನ ಸಭೆ ನಂತರವೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದ ಪರಿಣಾಮ ಸದನದಲ್ಲಿ ಗದ್ದಲ-ಗೊಂದಲ ಮತ್ತು ಕೋಲಾಹಲದ ವಾತಾವರಣ ಏರ್ಪಟ್ಟಿತು.

ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸರ್ಕಾರ ಚರ್ಚೆಗೆ ಹಾಗೂ ಕಲಾಪದಲ್ಲಿ ಭಾಗವಹಿಸಲು ಸಿದ್ಧವಿದೆ ಎಂದರೆ, ಜೆಡಿಎಸ್ ನ ಶ್ರೀಕಂಠೇಗೌಡ, ಸದನದಲ್ಲಿ ಜನರ ಸಮಸ್ಯೆ ಚರ್ಚೆಯಾಗಬೇಕು. ಸುಗಮ ಕಲಾಪಕ್ಕೆ ನಾವೆಲ್ಲಾ ಸಹಕರಿಸಬೇಕು ಎಂದರು.

ವ್ಯಯಕ್ತಿಕ ವಿಷಯಕ್ಕೆ ಸದನದ ಅಮೂಲ್ಯ ಸಮಯವನ್ನು ಕಾಂಗ್ರೆಸ್ ಸದಸ್ಯರು ಹಾಳುಗೆಡವುತ್ತಿದ್ದಾರೆ. ಸದಸ್ಯರ ಹಕ್ಕು ಮೊಟಕುಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗ ವಿರೋಧಿ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಪರಸ್ಪತ ಆರೋಪ ಮತ್ತು ದಿಕ್ಕಾರದ ಘೋಷಣೆಗಳ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆದದ್ದೂ ವಿಶೇಷವಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button