
ಕೋಲ್ಕತ್ತಾ: ಉತ್ತರಾಖಂಡದ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸತ್ತಿನಲ್ಲಿ ಮಾಡಲಾದ ದ್ವೇಷ ಭಾಷಣವು ಹಿಂದುತ್ವವನ್ನು ಬುಡಮೇಲು ಮಾಡುವುದಕ್ಕೆ ಸಮನಾದುದು ಎಂದು ಹಿರಿಯ ನ್ಯಾಯವಾದಿ ಮಹೇಶ್ ಜೇಠ್ಮಲಾನಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದುತ್ವವನ್ನು ಪ್ರಚಾರ ಮಾಡುವ ಹಕ್ಕಿನಲ್ಲಿ ತನಗೆ ನಂಬಿಕೆ ಇದೆ. ಆದರೆ ಧರ್ಮಸಂಸತ್ತಿನಲ್ಲಿ ಮಾಡಿರುವ ದ್ವೇಷಭಾಷಣ ಕ್ರಿಮಿನಲ್ ಕಾನೂನಿನ ನೇರ ಉಲ್ಲಂಘನೆಯಾಗಿದೆ. ದ್ವೇಷ ಭಾಷಣ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಿಂದೊಮ್ಮೆ ಡಾ.ರಮೇಶ್ ಯಶ್ವಂತ್ ಪ್ರಭು, ವರ್ಸಸ್ ಪ್ರಭಾಕರ್ ಕಾಶಿನಾಥ್ ಕುಂಟೆ ಹಾಗೂ ಇತರರ ಪ್ರಮುಖ ಪ್ರಕರಣದಲ್ಲಿ ತನ್ನ ತಂದೆ ಹಾಗೂ ಹಿರಿಯ ನ್ಯಾಯವಾದಿ ದಿವಂಗತ ರಾಮ್ ಜೇಠ್ಮಲಾನಿ ಸುಪ್ರೀಂ ಕೋರ್ಟ್ ನಲ್ಲಿ ಹಿಂದುತ್ವಕ್ಕಾಗಿ ವಾದಿಸಿದ್ದರು. ಚುನಾವಣಾ ಪ್ರಚಾರದಲ್ಲಿ ಹಿಂದುತ್ವವನ್ನು ʼಜೀವನ ವಿಧಾನʼ ಎಂದು ಪ್ರತಿಪಾದಿಸುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಅವರು ಸ್ಮರಿಸಿದ್ದಾರೆ.



