ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ರಾಜೇಶ್ ಅಂತಿಮ ದರ್ಶನಕ್ಕೆ ಅವಕಾಶ
ಬೆಂಗಳೂರು: ಕಳೆದ ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಇಂದು ಮುಂಜಾನೆ 2.20ಕ್ಕೆ ನಿಧನರಾಗಿದ್ದಾರೆ. ಈ ಬಗ್ಗೆ ರಾಜೇಶ್ ಅಳಿಯ ನಟ ಅರ್ಜನ್ ಸರ್ಜಾ ಮಾತನಾಡಿದ್ದು, ಈ ದಿನ ದುಃಖಕರವಾದ ದಿನ ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ರಾಜೇಶ್ ಅವರು ಡಾ.ರಾಜ್ಕುಮಾರ್ ರವರ ಪಂಕ್ತಿಯವರು. ಮನಸ್ಸಿಗೆ ಕಷ್ಟವಾಗುತ್ತಿದೆ ಎಂದರು.
ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಮೊದಲಿಗೆ ಪ್ರೋ ಕೋವಿಡ್, ಆಮೇಲೆ ಸಿಕೆಡಿ ಸಮಸ್ಯೆ ಆಗಿತ್ತು. ತುಂಬಾ ಸುಸ್ತು ಎಂದು ಆಡ್ಮಿಟ್ ಆಗಿದ್ದರು. ಬಹಳ ಪ್ರಯತ್ನ ಪಟ್ಟೆವು. ಆದರೆ ಫಲಿತಾಂಶ ಸಿಗಲಿಲ್ಲ. ಮುಂಜಾನೆ 2.20ಕ್ಕೆ ಅವರು ಇಹಲೋಕ ತ್ಯಜಿಸಿದರು ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.
11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಟು ಮಾಟಲಾಗಿದೆ. ಮಧ್ಯಾಹ್ನ 3.30ಕ್ಕೆ ಮೇಡಿ ಅಗ್ರಹಾರ ಲಕ್ಷ್ಮೀಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆಯಬಹುದು ಎಂದು ಸರ್ಜಾನ್ ಸರ್ಜಾ ಹೇಳಿದ್ದಾರೆ.
ರಾಜೇಶ್ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ಹಿರಯ ನಟ ರಾಜೇಶ್ ಅವರ ನಿಧನಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟ ರಾಜೇಶ್ ಅವರ ಅಗಲಿಕೆಯಿಂದಾಗಿ ಕನ್ನಡ ಚಿತ್ರರಂಗ ಅದ್ಭುತ ಕಲಾವಿದರೊಬ್ಬರನ್ನು ಕಳೆದುಕೊಂಡಿದೆ. ನಾಯಕ ನಟರಾಗಿ ಮಾತ್ರವಲ್ಲದೆ ಪೋಷಕ ನಟರಾಗಿಯೂ ಬೆಳ್ಳಿ ತೆರೆಯನ್ನು ಬೆಳಗಿದ ರಾಜೇಶ್ ಅವರು ನನಗೆ ಸಾಕಷ್ಟು ಸಮಯದಿಂದ ಚಿರಪರಿಚಿತರು. ಹಲವಾರು ಸಂದರ್ಭಗಳಲ್ಲಿ ನಾವು ಭೇಟಿಯಾಗಿದ್ದೆವು. ರಂಗಭೂಮಿ ಮೂಲಕ ಕಲಾ ಜಗತ್ತಿಗೆ ಪ್ರವೇಶ ಪಡೆದ ಮುನಿಚೌಡಪ್ಪ ಅವರಿಗೆ ರಂಗಭೂಮಿ ಕೊಟ್ಟ ಹೆಸರು ವಿದ್ಯಾಸಾಗರ್. ರಂಗಭೂಮಿ ಮೂಲಕವೇ ಬೆಳ್ಳೆ ತೆರೆಗೆ ಬಂದು ರಾಜೇಶ್ ಆಗಿ ಖ್ಯಾತಿ ಪಡೆದರು.
ನಾಯಕ ನಟರಾಗಿ ಮತ್ತು ಪೋಷಕ ಪಾತ್ರಗಳಲ್ಲೂ ಮಿಂಚಿ ಮೂರು ತಲೆ ಮಾರಿನ ಕನ್ನಡಿಗರಿಗೆ ಪರಿಚಿತರಾಗಿದ್ದವರು ರಾಜೇಶ್. ಒಬ್ಬೊಬ್ಬರಾಗಿ ಹಿರಿಯ ಕಲಾವಿದರನ್ನು ನಮ್ಮ ಕಲಾ ಜಗತ್ತು ಕಳೆದುಕೊಳ್ಳುತ್ತಿರುವುದು ಬಹಳ ದುಃಖದ ಸಂಗತಿ. ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅಭಿಮಾನಿಗಳಿಗೆ, ಕುಟುಂಬಕ್ಕೆ ಮತ್ತು ಬಂಧು ಮಿತ್ರರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದರು.
