
ನವದೆಹಲಿ: ಪಂಜಾಬ್ ಚುನಾವಣೆಗೆ ಕೆಲವೇ ದಿನಗಳಿರುವಾಗ ಹಿರಿಯ ಕಾಂಗ್ರೆಸ್ ನೇತಾರ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಮಂಗಳವಾರ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಂಪುಟದಲ್ಲಿ ಅಶ್ವನಿಕುಮಾರ್ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು. ನನ್ನ ಘನತೆಗೆ ಅನುಗುಣವಾದ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ತೊರೆದ ಯುವ ನೇತಾರ ಜ್ಯೂತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಆರ್ ಪಿ ಎನ್ ಸಿಂಗ್, ಸುಶ್ಮಿತಾ ದೇವ್, ಪ್ರಿಯಾಂಕಾ ಚತುರ್ವೆದಿ ಮತ್ತು ಲಲಿತೇಶಪತಿ ತ್ರಿಪಾಠಿ ಸಾಲಿಗೆ ಅಶ್ವನಿಕುಮಾರ್ ಕೂಡ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜಿನಾಮೆ ಪತ್ರದಲ್ಲಿ ಅವರು, ಈ ವಿಷಯದ ಬಗ್ಗೆ ನನ್ನ ಚಿಂತಶೀಲ ಪರಿಗಣನೆಯನ್ನು ನೀಡಿದ ನಂತರ ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ತು ನನ್ನ ಘನತೆಗೆ ಅನುಗುಣವಾಗಿ, ಪಕ್ಷದ ಪದರದ ಹೊರಗೆ ದೊಡ್ಡ ರಾಷ್ಟ್ರೀಯ ಕಾರಣಗಳನ್ನು ನಾನು ಅತ್ಯುತ್ತಮವಾಗಿ ನಿಭಾಯಿಸಬಲ್ಲೆ ಎಂದು ತೀರ್ಮಾನಿಸಿದೆ ಎಂದಿದ್ದಾರೆ.
ಕುಮಾರ್ ಅವರು ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನಿಕಟವರ್ತಿ ಎಂದು ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಜಿ.23 ಎಂದು ಕರೆಯಲ್ಪಡುವ 23 ಹಿರಿಯ ನಾಯಕರು 2020ರ ಆಗಸ್ಟ್ ನಲ್ಲಿ ಪಕ್ಷದಲ್ಲಿ ವ್ಯಾಪಕ ಬದಲಾವಣೆಗಳಿಗೆ ಕರೆ ನೀಡಿದ್ದ ಸಂದರ್ಭದಲ್ಲಿ ಸೋನಿಯಾಗಾಂಧಿಯನ್ನು ಬಲವಾಗಿ ಸಮರ್ಥಿಸಿದ್ದರು.



