Latestಕೊಡಗುಜಿಲ್ಲಾ ಸುದ್ದಿ

ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕೆಂಪು ಹರಳುಗಳ ಲೂಟಿ: ದಂಧೆಕೋರರ ಬಂಧನಕ್ಕೆ ಒತ್ತಾಯ

ಕೊಡಗು : ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಗೆ ಒಳಪಡುವ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಮೂಗಿನ ನೇರಕ್ಕೆ ಕೆಂಪು ಹರಳು ಕಲ್ಲುಗಳು ಲೂಟಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೂಕ್ತ ತನಿಖೆ ನಡೆಸಿ ದಂಧೆಕೋರರನ್ನು ಬಂಧಿಸುವಂತೆ ಶಾಸಕರಾದಿಯಾಗಿ ಪ್ರಮುಖರು ಒತ್ತಾಯಿಸಿದ್ದಾರೆ. ಭಾಗಮಂಡಲದ ಪ್ರವೇಶ ದ್ವಾರದಿಂದ ಕರಿಕೆ ರಸ್ತೆಗಾಗಿ ತಣ್ಣಿಮಾನಿ ಗ್ರಾಮದ ಕೊನೆಗೆ ತಲುಪಿದರೆ ಪಟ್ಟಿಘಾಟ್ ಮೀಸಲು ಅರಣ್ಯದ ಗಡಿ ಆರಂಭವಾಗುತ್ತದೆ. ಅಲ್ಲಿಂದ 6 ಕಿ.ಮೀ ಉದಕ್ಕೂ ಕಣಿವೆಯ ದುರ್ಗಮ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಪಶ್ಚಿಮ ಘಟ್ಟದ ಪ್ರಕೃತಿಯ ವಿಹಂಗಮ ನೋಟ ಕಾಣಸಿಗುತ್ತದೆ.

2200 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಟ್ಟ ಶ್ರೇಣಿಗಳು ಆಳ ಕಣಿವ ಮಾದರಿಯಲ್ಲಿ ಹರಡಿಕೊಂಡಿದ್ದು, ಕೊಡಗು – ಸುಬ್ರಮಣ್ಯ ಅರಣ್ಯ ವ್ಯಾಪ್ತಿಯೂ ಇಲ್ಲಿದೆ.

ಮೀಸಲು ಅರಣ್ಯವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧವಿದೆ. ಇದುವೇ ಈ ಕೆಂಪು ಹರಳು ಕಲ್ಲುದಂಧೆಗೆ ವರದಾನವಾಗಿ ಪರಿಣಮಿಸಿದೆ.

ಸಾರ್ವಜನಿಕರ ದೂರು ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಎಲ್ಲಿಯೂ ಸುರಂಗ ತೋಡಿದ ಕುರುಹುಗಳು ಪತ್ತೆಯಾಗಿರಲಿಲ್ಲ. ತೋಡಲಾಗಿದ್ದ ಸುರಂಗವನ್ನು ಸಂಶಯ ಬಾರದಂತೆ ಒಣಗಿದ ಹುಲ್ಲುಗಳಿಂದ ಮುಚ್ಚಿ ಪರಿಶೀಲನೆಗಾಗಿ ತೆರಳಿದ್ದ ಅಧಿಕಾರಿಗಳ ದಾರಿಯನ್ನೇ ತಪ್ಪಿಸಲಾಗಿತ್ತು.

ಮಾತ್ರವಲ್ಲದೇ ಸುರಂಗದ ಕೆಳ ಭಾಗದಲ್ಲಿ ಮಣ್ಣುಸುರಿದಿರುವುದು, ಚೀಲಗಳಲ್ಲಿ ಮಣ್ಣನ್ನು ತುಂಬಿಸಿ ಸಾಗಾಟಕ್ಕೆ ಸಿದ್ಧ ಮಾಡಿಟ್ಟಿರುವುದು ಕಂಡು ಬಂದಿತು.

ಹೀಗಾಗಿ ಕ್ಯಾಂಪ್‌ನಲ್ಲಿದ್ದ ಇಬ್ಬರು ಸಿಬ್ಬಂದಿಗಳ ವಿರುದ್ಧ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೇಯಂಡ ರವಿ ಕುಶಾಲಪ್ಪ, ಎಸಿಎಫ್ ಮೊಹಿಸಿನ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತೆರಳಿದಾಗ ಕೆಂಪು ಕಲ್ಲು ದಂಧೆಯ ವಾಸ್ತವತೆ ಬೆಳಕಿಗೆ ಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button