ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ: ರಾಮನಗರ ಎಸ್ಪಿ ಎಚ್ಚರಿಕೆ

ರಾಮನಗರ: ಪಾದಯಾತ್ರೆ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ನಿಯಮ ಮೀರಿ ಪಾದಯಾತ್ರೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ಕನಕಪುರ ತಾಲ್ಲೂಕಿನ ಮರಳೆ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಗಿರೀಶ್, ಪಾದಯಾತ್ರೆಗೆ ಅನುಮತಿ ನೀಡಲಾಗುವುದಿಲ್ಲ ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುಮತಿ ನೀಡಲಾಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಪಾದಯಾತ್ರೆ ಮಾಡಬಾರದೆಂದು ನೋಟೀಸ್ ಕೊಟ್ಟಿದ್ದೇವೆ. ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಪಾದಯಾತ್ರೆ ಮಾಡುವುದು ತಪ್ಪು ಎಂದು ಕೇಳಿಕೊಳ್ಳುತ್ತೇನೆ. ನಿಯಮ ಮೀರಿ ಪಾದಯಾತ್ರೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದುವರೆಗೂ ಮುಂಜಾಗ್ರತಾ ಕ್ರಮವಾಗಿ ಯಾರನ್ನು ಪೊಲೀಸದ ವಶಕ್ಕೆ ಪಡೆಯಲಾಗಿಲ್ಲ. ರಾಜ್ಯ ಸರ್ಕಾರದ ನಿಯಮ ಪಾಲಿಸಿದರೇ ಒಳ್ಳೆಯದು ಇಲ್ಲದಿದ್ದರೇ ಕಾನೂನು ಪ್ರಕಾರ ಕ್ರಮ ಅನಿವಾರ್ಯ. ಪಾದಯಾತ್ರೆಗಾಗಿ ನಾವು ಬಂದೋಬಸ್ತ್ ಮಾಡುತ್ತಿಲ್ಲ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ. ಭದ್ರತೆಗೆ 2 ಸಾವಿರ ಪೊಲೀಸರು ನಿಯೋಜನೆ ಮಾಡಲಾಗಿದೆ. ಬೇರೆ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಮತ್ತೊಮ್ಮೆ ಪಾದಯಾತ್ರೆ ಕೈ ಬಿಡಿ ಎಂದು ಕೇಳುತ್ತೇವೆ. ಅವರು ಮುಂದೂವರೆದರೆ ಕಾನೂನಿನಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಗಿರೀಶ್ ವಿವರ ನೀಡಿದರು.



