
ಮುಂಬಯಿ: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಪ್ರಕಟಿಸಿದೆ.
ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ವೇಳೆ ದ್ರಾವಿಡ್ ತಮ್ಮ ಜವಾಬ್ದಾರಿಯನ್ನು ಆರಂಭಿಸಲಿದ್ದಾರೆ. ರವಿಶಾಸ್ತ್ರಿ ಅವರ ಸ್ಥಾನವನ್ನು ತುಂಬಲು ಅಕ್ಟೋಬರ್ 26 ರಂದು ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಅಧ್ಯಕ್ಷರಾಗಿದ್ದ ದ್ರಾವಿಡ್ 19 ವರ್ಷ ವಯೋಮಿತಿ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ನೂತನ ಕೋಚ್ ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
“ನನ್ನ ಪಾಲಿಗೆ ಇದೊಂದು ಗೌರವದ ಅವಕಾಶ, ರವಿಶಾಸ್ರ್ರಿ ಅವರು ಕೋಚ್ ಆಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅದೇ ರೀತಿಯಲ್ಲಿ ತಂಡವನ್ನು ಯಶಸ್ಸಿನಡೆಗೆ ಕೊಂಡೊಯ್ಯಲು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಶ್ರಮಿಸುವೆ” ಎಂದು ದ್ರಾವಿಡ್ ಹೇಳಿದ್ದಾರೆ.



