
ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ರಿಷಬ್ ಪಂತ್ ಪಡೆಯ ಆಲ್ರೌಂಡ್ ಆಟಕ್ಕೆ ನಲುಗಿದ ಪಂಜಾಬ್ 9 ವಿಕೆಟ್ಗಳ ಸೋಲಿಗೆ ಶರಣಾಗಿದೆ. ಮೊದಲು ಪಂಜಾಬ್ ತಂಡವನ್ನು 115 ರನ್ಗೆ ನಿಯಂತ್ರಿಸಿದ ಡೆಲ್ಲಿ, ಆ ಬಳಿಕ ಸಣ್ಣ ಗುರಿಯನ್ನು ಕೇವಲ 10.3 ಓವರಲ್ಲಿ ತಲುಪಿ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರುವ ಜೊತೆಗೆ ತನ್ನ ರನ್ರೇಟ್ ಅನ್ನು ಉತ್ತಮಗೊಳಿಸಿಕೊಂಡಿತು.
ಸಣ್ಣ ಗುರಿ ಬೆನ್ನತ್ತುವಾಗ ತಂಡಗಳು ಎಡವಿದ ಅನೇಕ ಉದಾಹರಣೆಗಳಿವೆ. ಆದರೆ ಡೆಲ್ಲಿ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಮೊದಲ ಓವರ್ನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಪವರ್-ಪ್ಲೇನಲ್ಲಿ 81 ರನ್ ಚಚ್ಚಿದರು. 20 ಎಸೆತದಲ್ಲಿ 7 ಬೌಂಡರಿ, 1 ಸಿಕ್ಸರ್ನೊಂದಿಗೆ 41 ರನ್ ಸಿಡಿಸಿ ಶಾ ಔಟಾದರು.
ಆದರೆ ವಾರ್ನರ್ ಅಬ್ಬರ ನಿಲ್ಲಲಿಲ್ಲ. 30 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ನೊಂದಿಗೆ 60 ರನ್ ಸಿಡಿಸಿ ಔಟಾಗದೆ ಉಳಿದರು. ಐಪಿಎಲ್ನಲ್ಲಿ 53ನೇ ಅರ್ಧಶತಕ ದಾಖಲಿಸಿದರು. ಡೆಲ್ಲಿ ಇನ್ನಿಂಗ್ಸ್ ನಲ್ಲಿ ಒಟ್ಟು 18 ಬೌಂಡರಿ, 2 ಸಿಕ್ಸರ್ಗಳಿದ್ದವು. ಮೊದಲು ಬ್ಯಾಟ್ ಮಾಡಿದ ಪಂಜಾಬ್, ಡೆಲ್ಲಿ ಸ್ಪಿನ್ನರ್ಗಳ ದಾಳಿಗೆ ಕುಸಿಯಿತು.
ಡೆಲ್ಲಿ ಸ್ಪಿನ್ನರ್ಗಳು ಒಟ್ಟು 10 ಓವರಲ್ಲಿ ಕೇವಲ 45 ರನ್ ನೀಡಿ 6 ವಿಕೆಟ್ ಕಬಳಿಸಿದ್ದು, ಪಂಜಾಬ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಕುಲ್ದೀಪ್, ಅಕ್ಷರ್ ಹಾಗೂ ಲಲಿತ್ ತಲಾ 2 ವಿಕೆಟ್ ಕಬಳಿಸಿದರು. ಪಂಜಾಬ್ ಪರ ಜಿತೇಶ್ ಶರ್ಮಾ 32, ಮಯಾಂಕ್ ಅಗರ್ವಾಲ್ 24, ಶಾರುಖ್ ಖಾನ್ ಹಾಗೂ ರಾಹುಲ್ ಚಹರ್ ತಲಾ 12 ರನ್ ಗಳಿಸಿ ತಂಡದ ಮೊತ್ತವನ್ನು 100 ರನ್ ದಾಟಿಸಿದರು. 115 ರನ್ ಈ ಆವೃತ್ತಿಯಲ್ಲಿ ತಂಡವೊಂದರಿಂದ ದಾಖಲಾದ ಕನಿಷ್ಠ ಮೊತ್ತ.



