ಭೀಮ್ಲಾ ನಾಯಕ್ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಭಾವುಕರಾದ ಪವನ್ ಕಲ್ಯಾಣ್

ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಸಿನಿಮಾ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಚಿತ್ರದ ಬಿಡುಗಡೆಗೂ ಮೊದಲು ಅಂದ್ರೆ ನಿನ್ನೆ (ಫೆ.23)ರಂದು ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನೆರವೇರಿದೆ. ಈ ವೇಳೆ ನಟ ಪವನ್ ಕಲ್ಯಾಣ್ ಭಾವುಕರಾಗಿದ್ದು ಸಿನಿಮಾದ ಹೊರತು ನನಗೆ ಏನೂ ಗೊತ್ತಿಲ್ಲ ಎಂದಿದ್ದಾರೆ.
ಮೊದಲಿಗೆ ಭೀಮ್ಲಾ ನಾಯಕ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಫೆ.22ರಂದು ಆಯೋಜಿಸಲಾಗಿತ್ತು. ಆದರೆ ಆಂಧ್ರದ ಕೈಗಾರಿಕಾ ಸಚಿವ ಮೇಕಪೇಟಿ ಗೌತಮ್ ರೆಡ್ಡಿ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನ ಮುಂದೂಡಲಾಗಿತ್ತು. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸೇರಿದಂತೆ ಸಾಕಷ್ಟು ಮಂದಿ ಆಗಮಿಸಿದ್ದರು. ಈ ವೇಳೆ ನಟ ಪವನ್ ಕಲ್ಯಾಣ್ ತುಸು ಭಾವುಕರಾಗಿಯೇ ಮಾತನಾಡಿದರು.
‘ಸಿನಿಮಾ ನನಗೆ ಸಾಕಷ್ಟು ಭಿಕ್ಷೆ ನೀಡಿದೆ. ನನ್ನ ಈ ಜೀವನ, ಕೋಟ್ಯಂತರ ಮಂದಿ ಅಭಿಮಾನಿಗಳು ಎಲ್ಲವೂ ಸಿನಿಮಾ ನೀಡಿರುವ ಭಿಕ್ಷೆ. ಸಿನಿಮಾ ಇಲ್ಲದೇ ಇದ್ದಿದ್ದರೆ ನಾನು ಇಂದು ಏನಾಗಿದ್ದೆನೋ ಅದು ಆಗಿರುತ್ತಿರಲಿಲ್ಲ. ನಾನು ಪ್ರಜಾ ಸೇವೆಯಲ್ಲಿ ಇರಲು ಸಹ ಸಿನಿಮಾವೇ ಕಾರಣ. ಇಷ್ಟು ಮಂದಿ ನನ್ನನ್ನು ಅಭಿಮಾನಿಸುತ್ತಿದ್ದಾರೆಂದರೆ ನಾನು ಏನೋ ಆಗಿಬಿಟ್ಟಿದ್ದೇನೆ ಎಂಬ ಅಹಂ ಇಲ್ಲ. ಬದಲಿಗೆ ಈ ದೇಶಕ್ಕೆ, ನಮ್ಮ ರಾಜ್ಯಗಳಿಗೆ, ನಮ್ಮ ಜನರಿಗೆ ಏನಾದರೂ ತುಸು ಸೇವೆ ಮಾಡಬೇಕು ಎನ್ನುವ ಆಶಯವಷ್ಟೆ ನನ್ನದು’ ಎಂದಿದ್ದಾರೆ ಪವನ್ ಕಲ್ಯಾಣ್.
‘ಸಿನಿಮಾ ಬಿಟ್ಟು ಬೇರೆ ವೃತ್ತಿ ನನಗೆ ಗೊತ್ತಿಲ್ಲ. ಇದರಿಂದಷ್ಟೆ ನಾನು ಸಂಪಾದನೆ ಮಾಡಬಲ್ಲೆ. ಇದನ್ನು ಬಿಟ್ಟು ಬೇರೆ ದಾರಿ ನನಗೆ ಗೊತ್ತಿಲ್ಲ. ಸಿನಿಮಾಗೆ ಬಂದು ಸಾಕಷ್ಟು ವರ್ಷ ಆಗಿದೆ, ತುಂಬಾ ಅಭಿಮಾನಿಗಳಿದ್ದಾರೆ ಏನು ಮಾಡಿದರೂ ನಡೆಯುತ್ತದೆ ಎಂದುಕೊಳ್ಳುವುದರ ಬದಲು ಸಿನಿಮಾ ರಂಗಕ್ಕೆ ಮೊದಲು ಬಂದಾಗ ಹೇಗೆ ಶ್ರಮಹಾಕಿ, ಪ್ರೀತಿಯಿಂದ, ಏಕಾಗ್ರತೆಯಿಂದ ಕೆಲಸ ಮಾಡುತ್ತಿದ್ದೆನೊ ಹಾಗೆಯೇ ಈಗಲೂ ಮಾಡಲು ಯತ್ನಿಸುತ್ತೇನೆ ಎಂದಿದ್ದಾರೆ.
ಭೀಮ್ಲಾ ನಾಯಕ್ ಸಿನಿಮಾ ಆಗಲು ಮುಖ್ಯ ಕಾರಣ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಈ ಸಿನಿಮಾದ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಸಿನಿಮಾದ ಆರಂಭದಿಂದ ಅಂತ್ಯದ ವರೆಗೆ ಅವರ ಶ್ರಮವೇ ಪ್ರಮುಖವಾದುದು. ಅವರು ಇಲ್ಲದೇ ಇದ್ದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ ಎಂದಿದ್ದಾರೆ ಪವನ್ ಕಲ್ಯಾಣ್.



