ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ಗೌಪ್ಯ ಸಭೆ: ಮೂರನೇ ಪೀಠದ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆ
ಬಾಗಲಕೋಟೆ: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರು ಪುನರ್ವಸತಿ ಕೇಂದ್ರದಲ್ಲಿ ಗೌಪ್ಯ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.
ನಿನ್ನೆ ಪಂಚಮಸಾಲಿ ಸಮುದಾಯದ ಮುಖಂಡರೊಬ್ಬರ ಮನೆಯಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಬಾಗಲಕೋಟೆ , ವಿಜಯಪುರ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ 20 ಪಂಚಮಸಾಲಿ ಸ್ವಾಮೀಜಿಗಳು ಭಾಗಿಯಾಗಿದ್ದರು. ಪಂಚಮಸಾಲಿ ಮೂರನೇ ಪೀಠದ ಕಟ್ಟಡ ನಿರ್ಮಾಣ ಬಗ್ಗೆ ಚರ್ಚೆ ನಡೆಸಿದ್ದು ಜಮಖಂಡಿ-ವಿಜಯಪುರ ರಸ್ತೆ ಬಳಿ ಐದಾರು ಕಿಮೀ ಅಂತರದಲ್ಲಿ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.
ಮೂರನೇ ಪೀಠಕ್ಕೆ ಅಡಿಪಾಯದ ಬಗ್ಗೆ ಚರ್ಚೆ ನಡೆಸಿದರು. ದೀಪಾವಳಿ ಬಳಿಕ ಪಂಚಮಸಾಲಿ ಮೂರನೇ ಪೀಠದ ಕಟ್ಟಡಕ್ಕೆ ಶಂಕುಸ್ಥಾಪನೆ ಬಗ್ಗೆ ಚರ್ಚೆಸಿದ್ದು,ಈ ಹಿಂದೆ ಜಮಖಂಡಿ ನಗರದಲ್ಲಿ ಎರಡು ಬಾರಿ ಸಭೆ ನಡೆಸಿದ್ದರು.
ಸಭೆಯಲ್ಲಿ ಬಬಲೇಶ್ವರ ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಹಿರೆಮಠದ ಸಂಗನಬಸವ ಸ್ವಾಮೀಜಿ. ಕುಂಚನೂರು ಸಿದ್ದಲಿಂಗದೇವರು. ಆಲಗೂರು ಲಕ್ಷ್ಮಣ ಮುತ್ಯಾ ಸ್ವಾಮೀಜಿ, ಗೋಕಾಕ್ ನ ಗುರುಬಸವ ಸ್ವಾಮೀಜಿ ಸೇರಿದಂತೆ 20 ಸ್ವಾಮೀಜಿಗಳು ಭಾಗಿಯಾಗಿದ್ದು, ಈ ಹಿಂದೆ ಮೂರನೇ ಪೀಠ ಸ್ಥಾಪನೆ ಬಗ್ಗೆ ಸ್ವಾಮೀಜಿಗಳು ಸುಳಿವು ನೀಡಿದ್ದರು.
ಸ್ವಾಮೀಜಿಗಳು ಹಾಗೂ ಕೆಲವೇ ಮುಖಂಡರಿಗೆ ಸಭೆಗೆ ಅವಕಾಶ ನೀಡಲಾಗಿತ್ತು. ಮೊಬೈಲ್ ಕೂಡ ಒಳ ತರದಂತೆ ಗೌಪ್ಯ ಸಭೆ ನಡೆಸಿದರು.



