ಮೈಕ್ ಬಳಸುವ ಮಸೀದಿ, ಮಂದಿರಗಳಿಗೆ ನೋಟಿಸ್: ಆದೇಶ ಉಲ್ಲಂಘಿಸಿದ್ರೆ ಕ್ರಮ ಎಂದ ಕಮಲ್ ಪಂತ್

ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಿರುವ ಮೈಕ್ ಬ್ಯಾನ್ ಮಾಡಬೇಕು. ಇಲ್ಲವಾದರೆ ಸಂಪೂರ್ಣ ಹಿಂದೂ ದೇಗುಲಗಳಲ್ಲೂ ಮೈಕ್ ಅಳವಡಿಸಲಾಗುವುದು ಎಂದು ಹಿಂದೂಪರ ಸಂಘಟನೆಗಳು ಹೋರಾಟ ನಡೆಸ್ತಿವೆ. ಇದೀಗ ಹೈಕೋರ್ಟ್ ನಿರ್ದೇಶನದಂತೆ ಪೊಲೀಸರಿಂದ ಕೆಲಸ ನಡೆಯುತ್ತಿದ್ದು, ಮಸೀದಿ, ಮಂದಿರ ಸೇರಿದಂತೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಹೈಕೋರ್ಟ್ ಆದೇಶ ಪಾಲಿಸಬೇಕು, ಇಲ್ಲವಾದರೆ ಶಿಕ್ಷೆ ಆಗೋದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ 6 ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಕೆಲಸ ಮಾಡುತ್ತಾ ಇದ್ದಾರೆ. ಮಸೀದಿ, ಮಂದಿರ, ಕಾರ್ಖಾನೆ, ಪಬ್ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಧಾರ್ಮಿಕ ಮುಖಂಡರ ಜತೆ ಈ ಬಗ್ಗೆ ಸಭೆ ನಡೆಸಲಾಗಿದ್ದು, ಅವರಿಗೂ ಮಾರ್ಗದರ್ಶನ ನೀಡಲಾಗಿದ್ದು, ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ.
ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು. ಹೈಕೋರ್ಟ್ ಆದೇಶ ಉಲ್ಲಂಘಿಸಿದರೆ ಶಿಕ್ಷೆ ಆಗುತ್ತೆ. ಆದೇಶ ಉಲ್ಲಂಘಿಸಿದ ಕಡೆ ಮೈಕ್ ಗಳನ್ನ ಜಪ್ತಿ ಮಾಡುವುದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಶಬ್ದಮಾಲಿನ್ಯ ನಿಯಂತ್ರಣ ನಿಯಮದ ಪ್ರಕಾರ ಪೊಲೀಸರ ಅನುಮತಿಯಿಲ್ಲದೇ ಲೌಡ್ ಸ್ಪೀಕರ್ ಬಳಸುವಂತೆಯೇ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಲೌಡ್ ಸ್ಪೀಕರ್ ಬಳಸುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧವನ್ನು ವಿಧಿಸಲಾಗಿದೆ ಎಂದರು.
