ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಅನುಮತಿ ನೀಡಿಲ್ಲ: ಆನ್ಲೈನ್ ಕ್ಲಾಸ್ ಮಾಡುತ್ತಿದ್ದೇವೆ: ಡಿಡಿಪಿಐ ಶ್ರೀನಿವಾಸ ಮೂರ್ತಿ

ಮೈಸೂರಿನ ಕಾಲೇಜೊಂದರಲ್ಲಿ ಸಮವಸ್ತ್ರ ನಿಷೇದಿಸಿದ್ದು, ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಅನುಮತಿ ನೀಡಿದೆ ಎಂದು ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಡಿಪಿಐ ಶ್ರೀನಿವಾಸ ಮೂರ್ತಿ ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ನಾವು ತರಗತಿಗೆ ಬರಲು ಅನುಮತಿ ನೀಡಿಲ್ಲ. ಸುಳ್ಳು ಸುದ್ದಿಗೆ ಯಾರು ಕಿವಿಕೊಡಬಾರದು ಎಂದಿದ್ದಾರೆ.
ಮೈಸೂರಿನ ರಾಜೀವ್ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 293 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 291 ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಉಳಿದ ಇಬ್ಬರು ವಿದ್ಯಾರ್ಥಿನಿಯರು ಹಿಂದೂ ಧರ್ಮಕ್ಕೆ ಸೇರಿದ್ದಾರೆ.
ಕಾಲೇಜು ಪುನರಾರಂಭ ಆದ ಮೇಲೆ ಕೇವಲ 14 ವಿದ್ಯಾರ್ಥಿನಿಯರಷ್ಟೇ ತರಗತಿಗೆ ಹಿಜಾಬ್ ಹಾಕಿಕೊಂಡು ಬಂದರು. ಶಿಕ್ಷಕರು ತೆಗೆಯಲು ಹೇಳಿದರೂ ನಿರಾಕರಿಸಿದರು. ಆ ದಿನ ತರಗತಿಗೆ ಹಾಜರಾಗದೆ ವಾಪಸ್ ತೆರಳಿದರು. ಈ ಬಗ್ಗೆ ಪೋಷಕರ ಜೊತೆ ತೀರ್ಮಾನಿಸಿದ್ದು ಹಿಜಾಬ್ ವಿವಾದ ಇತ್ಯರ್ಥವಾಗುವರೆಗೆ ಮಕ್ಕಳ ಶಿಕ್ಷಣ ಮೊಟಕುಗೊಳ್ಳುವುದು ಬೇಡ. ಹಾಗಾಗಿ ಆನ್‌ಲೈನ್‌ನಲ್ಲೇ ಪಾಠ ಮಾಡಿಕೊಡಿ ಎಂದು ಮನವಿ ಮಾಡಿದರು. ಪೋಷಕರ ಮನವಿ ಮೇರೆಗೆ ಆನ್ಲೈನ್ ತರಗತಿಗಳು ನಡೆಯುತ್ತಿರೋದಾಗಿ ತಿಳಿಸಿದ್ದಾರೆ. ಅಲ್ಲದೆ ಸುಳ್ಳು ಸುದ್ದಿಗೆ ಕಿವಿಗೊಡ ಬಾರದು ಎಂದಿದ್ದಾರೆ.



