
ಬೆಂಗಳೂರು: ಇದೇ ಜ.9ರಿಂದ ಆರಂಭವಾಗಲಿರುವ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಯಾವುದೇ ಬಾಧಕ ಇಲ್ಲ.ಅದರ ಪಾಡಿಗೆ ಅದು ನಡೆಯುತ್ತದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಮನವಿ ಮಾಡುವ ಬದಲು ತಮ್ಮ ಜವಾಬ್ದಾರಿಯನ್ನು ಅವರು ಮೊದಲು ಸಮರ್ಥವಾಗಿ ನಿಭಾಯಿಸಲಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ತಂದು ಜನರಿಗೆ ಸಹಾಯ ಮಾಡಲಿ ಎಂದರು.
ರಾಜ್ಯದಲ್ಲಿ ಕೊರೋನಾ ವಿಷಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಯಾವ ರೀತಿ ಕಿರುಕುಳ ನೀಡಲಾಗುತ್ತಿದೆ ಎಂದು ಸ್ಥಳಪರಿಶೀಲನೆ ನಡೆಸಲಿ ಎಂದು ಹೇಳಿದರು.
ಸೋಂಕು ಹೆಚ್ಚಾದರೆ ಕಾಂಗ್ರೆಸ್ ಹೊಣೆ ಎಂಬ ಹೇಳಿಕೆಗೆ, ‘ಬಿಜೆಪಿಯವರು ಈಗಾಗಲೇ ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಅವರು ಕೋವಿಡ್ ಸಮಯದಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಯಾಕೆ ಅವರ ವಿರುದ್ಧ ಸಮನ್ಸ್ ಜಾರಿ ಮಾಡಿ, ಪ್ರಕರಣ ದಾಖಲಿಸಿಲ್ಲ? ಸಚಿವರ ಮೇಲೆ ಪ್ರಕರಣ ಯಾಕಿಲ್ಲಎಂದು ಪ್ರಶ್ನಿಸಿದರು.
ನೂರು ಪ್ರಕರಣ ದಾಖಲಿಸಿ, ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ. ರಾಜ್ಯದ ಜನರ ಪರವಾಗಿ, ಅವರ ಧ್ವನಿಯಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ ಹೇಳಿದರು.
ಸಂಸದ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಬೇಕಿದ್ದರೆ ದೇಶಾದ್ಯಂತ ಅವರು ಪ್ರತಿಭಟಿಸಲಿ. ಬಿಜೆಪಿಯ ಸಂಸ್ಕೃತಿ ದರ್ಶನ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅವರ ಸಚಿವರು ಆಡಿರುವ ನುಡಿಮುತ್ತಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಆರ್. ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಮಾಣೀಕರಿಸಿ ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಬಡ್ತಿ ನೀಡಲಿ ಎಂದು ವ್ಯಂಗ್ಯವಾಡಿದರು.
ರಾಮನಗರ ರಿಪಬ್ಲಿಕ್ ಆಗಲು ಬಿಡುವುದಿಲ್ಲ ಎಂಬ ಅಶ್ವಥ್ ನಾರಾಯಣ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದಕ್ಕೆ ಉತ್ತರ ನೀಡಲು ಜನರಿದ್ದು, ಅವರು ನೀಡುತ್ತಾರೆ’ ಎಂದರು



