
ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾದ ನಂತರ ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಮೊದಲ ಅಧಿವೇಶನ ನಾಳೆ ಸೋಮವಾರ ಸೆ.13 ರಿಂದ 24 ರವರೆಗೆ 10ದಿನಗಳ ಕಾಲ ನಡೆಯಲಿದೆ. ಈ ಬಾರಿ ಅಧಿವೇಶನ ಹಲವು ವಿಶೇಷತೆಗಳಿಂದ ಕೂಡಿದೆ.
ಕಲಾಂ ನಂತರ ಬರಲಿದ್ದಾರೆ ಬಿರ್ಲಾ:
ಪ್ರಸಕ್ತ ವರ್ಷ ಬರೋಬ್ಬರಿ ಆರು ತಿಂಗಳ ನಂತರ ನಡೆಯಲಿರುವ ಅಧಿವೇಶನದ ಕೊನೆಯ ದಿನ ಮಧ್ಯಾಹ್ನದ ನಂತರ ಲೋಕಸಭೆ ಸ್ಪೀಕರ್ ಓಂ ಬರ್ಲಾ ‘ಸಂಸದೀಯ ಮೌಲ್ಯಗಳು’ ವಿಷಯ ಕುರಿತಂತೆ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಧಿವೇಶನ ತೀವ್ರ ಮಹತ್ವ ಪಡೆದಿದೆ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ದಿವಂಗತ ಧರ್ಮಸಿಂಗ್ ಮುಖ್ಯಮಂತ್ರಿ ಹಾಗೂ ದಿವಂಗತ ಕೆ.ಆರ್.ಪೇಟೆ ಕೃಷ್ಣ ವಿಧಾನಸಭಾಧ್ಯಕ್ಷ ಮತ್ತು ವಿ.ಆರ್.ಸುದರ್ಶನ್ ವಿಧಾನಪರಿಷತ್ ಸಭಾಪತಿಯಾಗಿದ್ದ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಏ.ಪಿ.ಜೆ ಅಬ್ದುಲ್ ಕಲಾಂ ಅವರು 2015ರ ನವೆಂಬರ್ 20ರಂದು ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು.
ಈ ಬಾರಿ ಅಧಿವೇಶನವನ್ನು ಅತ್ಯಂತ ಗಾಂಭಿರ್ಯ ಹಾಗೂ ಬಹಳ ಕಟ್ಟುನಿಟ್ಟಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಹೇಳಿದ್ದಾರೆ.10 ದಿನಗಳ ಕಾಲ ಗಂಭೀರವಾಗಿ ಸದನ ನಡೆಸಲು ತೀರ್ಮಾನಿಸಲಾಗಿದೆ. ಸಚಿವರು ಹಾಗೂ ಸದಸ್ಯರು ಅನಗತ್ಯ ರಜೆ ಪಡೆಯದಂತೆ ತಿಳಿಸಲಾಗಿದೆ. ಕಡ್ಡಾಯವಾಗಿ ಎಲ್ಲಾ ಸದಸ್ಯರು ಸದನದ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂಬುದು ತಮ್ಮ ಅಭಿಲಾಷೆ ಎಂದು ತಿಳಿಸಿದ್ದಾರೆ. ಇದಕ್ಕೆ ಎಷ್ಟು ಕಿಮ್ಮತ್ತು ದೊರೆಯಲಿದೆ ಎಂಬುದು ಹತ್ತು ದಿನಗಳ ಅಧಿವೇಶನ ನಂತರ ಗೊತ್ತಾಗಲಿದೆ.
ಶಾಸಕರ ಬೇಜವಾಬ್ದಾರಿ:
ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನವನ್ನು ಶಾಸಕರು, ಸಚಿವರು ಗಂಭೀರವಾಗಿ ತೆಗೆದುಕೊಳ್ಳದೆ ಅದೆಷ್ಟೋ ಬಾರಿ ಸದನ ನಡೆಸಲು ಕೋರಂ ಕೊರತೆ ಎದುರಾಗುವುದು, ಸದನ ಖಾಲಿ ಕುರ್ಚಿಗಳಿಂದ ಭಣಗುಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಸಕಾಲದಲ್ಲಿ ಸದನದಲ್ಲಿ ಹಾಜರಿದ್ದು ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾದ ಆ ಮೂಲಕ ಜನರ ದೂರು-ದುಮ್ಮಾನ, ಸಮಸ್ಯೆ-ಸಂಕಟಗಳಿಗೆ ಸ್ಪಂದಿಸುವ ಮತ್ತು ತಮ್ಮ ಅಮೂಲ್ಯ ಸಲಹೆ-ಸೂಚನೆಗಳ ಮೂಲಕ ಸರ್ಕಾರ ಸರಿದಾರಿಯಲ್ಲಿ ಮುನ್ನಡೆಯಲು ನೆರವಾಗಬೇಕಾದ ಹಾಗೂ ನಾಡನ್ನು ಸಮಗ್ರ ಅಭಿವೃದ್ಧಿ ಮತ್ತು ಪ್ರಗತಿಪಥದತ್ತ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ನಿಭಾಯಿಸಬೇಕಾದ ಶಾಸಕರೇ ಸದನದ ಕಾರ್ಯಕಲಾಪಗಳನ್ನು ಗಂಭೀರವಾಗಿ ತೆಗೆದು ಕೊಳ್ಳದೇ ಕುಂಟು ನೆಪಗಳ ಮೂಲಕ ಸದನದ ಕಾರ್ಯಕಲಾಪಗಳಿಂದದೂರ ಉಳಿದು ತಮ್ಮ ಬೇಜವಾಬ್ದಾರಿ ಪ್ರದರ್ಶಿಸುವ ಪರಿ ಸಾರ್ವತ್ರಿಕ ಟೀಕೆಗೆ ಗುರಿಯಾಗಿರುವುದು ಜಗಜ್ಜಾಹೀರಾಗಿಯೇ ಇದೆ. ಇದರಿಂದ ಜನರ ಹಣ ವೃಥವಾಗಿ ಪೋಲಾಗುವುದು ಮಾತ್ರ ಅಲ್ಲ ಜನಪ್ರತಿನಿಧಿಗಳೆನಿಸಿಕೊಂಡವರು ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಮಾಡುವ ಮೋಸ ಮತ್ತು ಬಗೆಯುವ ದ್ರೋಹವೇ ಆಗಿದೆ.
ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜು :
ಇನ್ನು ಜನಸಾಮಾನ್ಯರನ್ನು ತೀರ್ವವಾಗಿ ಹೈರಾಣಾಗಿಸಿರುವ ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಮತ್ತಿತರ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನಗಳ ಮೇಲೆ ವಿಧಿಸಲಾಗುತ್ತಿರುವ ಅತ್ಯಾಧಿಕ ತೆರಿಗೆ ದರದ ಕಡಿತಕ್ಕೆ ಆಗ್ರಹ, ಕೋವಿಡ್ ಪ್ರಕರಣಗಳ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಲಕ್ಷಾಂತರ ಮಂದಿಯ ಸಾವು-ನೋವುಗಳ ಸರಣಿ ಸರಮಾಲೆ,ಸತ್ತವರು ಎಷ್ಟು ಎಂಬುದರ ಬಗೆಗಿನ ಸುಳ್ಳು ಅಂಕಿ-ಅಂಶಗಳು, ಎರಡನೇ ಅಲೆ ಸಂದರ್ಭದಲ್ಲಿ ಔಷಧ, ಆಸ್ಪತ್ರೆಗಳಲ್ಲಿ ಸಿಗದ ಹಾಸಿಗೆ, ಆಕ್ಸಿಜನ್, ವೆಂಟಿಲೆಟರ್ ಕೊರತೆಯಿಂದ ಜನತೆ ಅನುಭವಿಸಿದ ನೋವು, ಆಕ್ರಂದನಗಳು ಮತ್ತಿತರ ವಿಚಾರಗಳು ಸದನದಲ್ಲಿ ಪ್ರತಿಧ್ವನಿಸಲಿವೆ.
ಮಳೆ ಮತ್ತು ಅತಿವೃಷ್ಠಿಗೆ ಸಿಲುಕಿ ತೊಳಲಿದ ಜನರ ತೊಳಲಾಟ, ಕುಸಿದ ಕಾನೂನು ಸುವ್ಯವಸ್ಥೆ, ಮೈಸೂರಿನ ಅತ್ಯಾಚಾರ ಪ್ರಕರಣ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ವಿವಾದಾತ್ಮಕ ಹೇಳಿಕೆ, ಕುಸಿದಿರುವ ಹಣಕಾಸು ಪರಿಸ್ಥಿತಿ, ಕೇಂದ್ರದಿಂದ ರಾಜ್ಯಕ್ಕೆ ಇನ್ನೂ ಬಿಡುಗಡೆಯಾಗದ ಜಿಎಸ್ಟಿ ತೆರಿಗೆ ಪಾಲು, ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಿಂದ ಆದಿಯಾಗಿ ಕೇಂದ್ರದಿಂದ ರಾಜ್ಯಕ್ಕೆ ಸಕಾಲದಲ್ಲಿ ಸಿಗದ ಸಹಾಯ ಹಸ್ತ, ಮೇಕೆದಾಟು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅನುಮತಿ ಮತ್ತು ಅಗತ್ಯ ನೆರವು ನೀಡುವಲ್ಲಿ ಕೇಂದ್ರದ ಮೀನಾಮೇಷ, ಮೇಕೆದಾಟು ಸಂಬಂಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದ್ವಂದ್ವತೆಯ ಹೇಳಿಕೆ, ಕುಸಿದಿರುವ ಆರ್ಥಿಕ ಸ್ಥಿತಿ, ಕೇವಲ ಭಾಷಣ ಮತ್ತು ಘೋಷಣೆಗಳಿಗಷ್ಟೇ ಸೀಮಿತವಾದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ವೈಖರಿ ಮತ್ತಿತರ ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಸಜ್ಜಾಗಿ ನಿಂತಿದೆ.
ಪ್ರತಿಧ್ವನಿಸಲಿದೆ ಸ್ಥಳೀಯ ಸಂಸ್ಥೆ ಚುನಾವಣೆ ವಿಷಯ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹೊರತಾಗಿಯೂ ಎರಡು ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯಲ್ಲಿ ಪ್ರತಿಪಕ್ಷ ಗಳಾದ ಕಾಂಗ್ರೆಸ್-ಜೆಡಿಎಸ್ ಮೇಲುಗೈ ಸಾಧಿಸಿದ್ದವು. ಮೊನ್ನೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪ್ರತಿಪಕ್ಷಗಳಿಗಿಂತ ಆಡಳಿತ ಪಕ್ಷವಾದ ಬಿಜೆಪಿ ಕೇವಲ 14 ಸ್ಥಾನಗಳನ್ನು ಮಾತ್ರ ಹೆಚ್ಚು ಗಳಿಸಲು ಶಕ್ತವಾಯಿತು. ಆದರೂ ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಗಳಲ್ಲಿ ವಾಮ ಮಾರ್ಗದ ಮೂಲಕ ಅಧಿಕಾರದ ಗಾದಿಯನ್ನೇರಲು ಬಿಜೆಪಿ ಹರ ಸಾಹಸ ನಡೆಸುತ್ತಿದೆ ಎಂಬ ಆರೋಪಗಳಿವೆ. ಈ ವಿಚಾರವೂ ಸದನದಲ್ಲಿ ಚರ್ಚೆಗೆ ಬರುವ , ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ವಾತಾವರಣಕ್ಕೆ ಎಡೆ ಮಾಡಿಕೊಡುವ ನಿರೀಕ್ಷೆ ಇದೆ.
ಕಾಂಗ್ರೆಸ್ ಈಗಾಗಲೇ ಶಾಸಕಾಂಗ ಪಕ್ಷದ ಸಭೆ ನಡೆಸಿ ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಈಗಾಗಲೇ ಪೂರ್ವಭಾವಿ ತಯಾರಿ ನಡೆಸಿದೆ.
ಜನತಾಪರಿವಾರದಿಂದ ಬಂದು ಬಿಜೆಪಿಯಲ್ಲಿ ಸಿಎಂ ಆಗುವ ಯೋಗ ಪಡೆದ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಸೌಹಾರ್ದಯುತ ಮಾತುಕತೆ ನಡೆಸಿದ್ದರು. ರಾಜಕೀಯ ಕಾರಣಗಳಿಂದ ಈ ಭೇಟಿ ಮಹತ್ವ ಪಡೆದಿತ್ತು. ಬೊಮ್ಮಾಯಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದ ಗೌಡರು, ಬೊಮ್ಮಾಯಿ ಅವರಿಗೆ ನಮ್ಮ ಸಹಕಾರ ಇದೆ ಎಂದಿದ್ದರು.
ಇದಾದ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಜೆಡಿಎಸ್ ನಿಗೂಢ ನಡೆ
ಸರ್ಕಾರದ ವೈಫಲ್ಯಗಳ ಬಗ್ಗೆ ಕುಮಾರಸ್ವಾಮಿ ಚಕಾರ ಎತ್ತದಿರುವುದೇ ಇದಕ್ಕೆ ಕಾರಣ, ಕಾಂಗ್ರೆಸ್ಗಿಂತ ಬಿಜೆಪಿ ಪರ ಅವರು ವಾಲುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇನೆ ಇದ್ದರೂ ಕುಮಾರಸ್ವಾಮಿ ಅವರು ಈವರೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿಲ್ಲ. ನಾಳೆ ಸೋಮವಾರ ಸಂಜೆ ಶಾಸಕಾಂಗ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಮೈಸೂರು ಮಹಾನಗರಪಾಲಿಕೆ ನಂತರ ಕಲಬುರಗಿ ಪಾಲಿಕೆ ಆಡಳಿತ ವನ್ನೂ ಬಿಜೆಪಿ ಗೆ ಧಾರೆ ಎರೆಯಲು ಅವರು ಒಲವು ಹೊಂದಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇತ್ತ ಆಡಳಿತ ಪಕ್ಷವಾದ ಬಿಜೆಪಿ ಕೂಡ ಪ್ರತಿ ಪಕ್ಷಗಳ ತಂತ್ರಕ್ಕೆ ಪ್ರತಿಯಾಗಿ ಕಾರ್ಯತಂತ್ರ ರೂಪಿಸಲು ಸೋಮವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಸಭೆಗೆ ಪಕ್ಷದ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು ಎಂದು ವಿಧಾನ ಮಂಡಲದ ಉಭಯ ಸದನಗಳ ಮುಖ್ಯಸಚೇತಕರ ಮೂಲಕ ಸೂಚಿಸಲಾಗಿದೆ. ಸದನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿಗೆ ಪಕ್ಷದ ಶಾಸಕರು, ಸಚಿವರು ಸಮರ್ಪಕವಾಗಿ ಉತ್ತರಿಸಬೇಕು. ಕಾಂಗ್ರೆಸ್ ಅವಧಿಯ ಆಡಳಿತ ವೈಫಲ್ಯ ಮತ್ತು ತೈಲ ಬೆಲೆ ಏರಿಕೆ ಸಂಬಂಧ ಪೂರ್ವಭಾವಿ ತಯಾರಿಯೊಂದಿಗೆ ಸಭೆಗೆ ಬರಬೇಕು ಎಂದೂ ತಿಳಿಸಲಾಗಿದೆ.
18 ವಿಧೇಯಕಗಳ ಮಂಡನೆ
ಕಳ್ಳಭಟ್ಟಿ ವ್ಯಾಪಾರಿಗಳ,ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ,ಕೊಳಚೆ ಪ್ರದೇಶಗಳನ್ನು ಕಬಳಿಸುವವರ,ಹಾಗೂ ದೃಶ್ಯ ಮತ್ತು ಧ್ವನಿ (ವಿಡಿಯೋ-ಆಡಿಯೋ)ಕಳ್ಳ ಮುದ್ರಕರ ಚಟುವಟಿಕೆಗಳ ಪ್ರತಿಬಂಧಕ ತಿದ್ದುಪಡಿ ವಿಧೇಯಕ 2021 ಸೇರಿದಂತೆ 18ವಿಧೇಯಕಗಳು, ಕಳೆದ ಅಧಿವೇಶನ ನಂತರ ಸರ್ಕಾರದಿಂದ ಹೊರಡಿಸಲಾದ ಆದ್ಯಾದೇಶಗಳು ವಿಧಾನಸಭೆಯಲ್ಲಿ ಮಂಡನೆಯಾಗಿ ಮೇಲ್ಮನೆ ಅಂಗೀಕಾರದ ನಂತರ ವಿಧಾನಸಭೆಯಲ್ಲಿ ಅಂತಿಮವಾಗಿ ಅಂಗೀಕಾರವಾಗುವ ನಿರೀಕ್ಷೆ ಇದೆ.
ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳು, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು, ಅರ್ಧ ಗಂಟೆ ಕಾಲಾವಧಿಯ ಚರ್ಚೆ, ಶೂನ್ಯವೇಳೆ, ಗಮನಸೆಳೆಯುವ ಸೂಚನೆಗಳು, ನಿಲುವಳಿ ಸೂಚನೆಗಳು ಚರ್ಚೆಗೆ ಬರಲಿವೆ. ಈ ಬಾರಿ ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಮಾಹಿತಿಗಳು ವಿಧಾನಮಂಡಲದ ವೆಬ್‍ಸೈಟ್‍ನಲ್ಲಿ ಲಭ್ಯವಾಗಲಿದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ.
ಅತ್ಯುತ್ತಮ ಶಾಸಕ ಪ್ರಶಸ್ತಿ
ಅಧಿವೇಶನದಲ್ಲಿ ಒಬ್ಬ ಶಾಸಕರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಆಯ್ಕೆ ಸಮಿತಿ ರಚಿಸಿ ಆ ಮೂಲಕ ಆಯ್ಕೆ ಮಾಡಲಾಗುವುದುಎಂದು ಅವರು ತಿಳಿಸಿದ್ದಾರೆ.
ಸದನ ವೀಕ್ಷಣೆಗೆ ಅವಕಾಶ
ಕೋವಿಡ್-19ರ ಹಿನ್ನೆಲೆಯಲ್ಲಿ ಸದನದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ. ಈ ಬಾರಿ ಅಧಿವೇಶನದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಪ್ರವಾಸ ಬೇಡ. ಸದನ ವೀಕ್ಷಣೆಗೆ ಅವರಿಗೆ ಅವಕಾಶ ಇಲ್ಲ. ಕರೋನಾ ಮಾರ್ಗಸೂಚಿ ಪ್ರಕಾರ ಸದಸ್ಯರ ನಡುವೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್, ಸ್ಯಾನಿಟೈಸರ್ ಬಳಕೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿಧಾನಮಂಡಲ ಉಭಯ ಸದನಗಳ ಕಾರ್ಯಕಲಾಪ ನಡೆಸಲು ತೀರ್ಮಾನಿಸಲಾಗಿದೆ



