ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಾಲಾ

ಬರ್ಮಿಂಗ್ಹ್ಯಾಮ್ : ಕಿರಿಯ ವಯಸ್ಸಿನಲ್ಲೇ ಹೋರಾಟದ ಮೂಲಕ ಜಗತ್ತಿನ ಗಮನ ಸೆಳೆದಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಾಲಾಲಾ ಯೂಸುಫ್ ಝಾಯಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಬ್ರಿಟನ್ನಿನ ಬರ್ಮಿಂಗ್ ಹ್ಯಾಮ್ ನಗರದಲ್ಲಿ ನಡೆದ ತಮ್ಮ ನಿಖಾ (ವಿವಾಹ) ಕಾರ್ಯಕ್ರಮದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
“ಇದು ನನ್ನ ಬದುಕಿನ ಅಮೂಲ್ಯ ದಿನವಾಗಿದೆ. ಅಸ್ಸರ್ ಅವರೊಂದಿಗೆ ಬಾಳ ಸಂಗಾತಿಯಾಗಿದ್ದೇನೆ. ನಮ್ಮ ಕುಟುಂಬಸ್ಥರ ಜತೆ ವಿವಾಹ ಸಮಾರಂಭವನ್ನು ಸಂಭ್ರಮಿಸಿದ್ದೇವೆ. ನಿಮ್ಮ ಪ್ರಾರ್ಥನೆ ನಮ್ಮ ಜತೆಗಿರಲಿ. ಮುಂದಿನ ಪಯಣಕ್ಕೆ ಜತೆಯಾಗಿ ಹೆಜ್ಜೆಯಿಡುತ್ತಿದ್ದೇವೆ ಎಂದು 24 ವರ್ಷದ ಮಲಾಲಾ ತಮ್ಮ ಟ್ವೀಟ್ ನಲ್ಲಿ ವಿವರಿಸಿದ್ದಾರೆ.
ಕೇವಲ 17ವರ್ಷವಾಗಿದ್ದಾಗ 2014ರಲ್ಲಿ ಮಲಾಲಾ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿ ಅತ್ಯಂತ ಕಿರಿಯ ನೊಬೆಲ್ ಪುರಸ್ಕೃತೆಯಾಗಿ ಗುರುತಿಸಿಕೊಂಡರು. ಇವರು ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ನಡೆಸಿದ ಸುದೀರ್ಘ ಹೋರಾಟ ಇಡೀ ವಿಶ್ವದ ಗಮನ ಸೆಳೆದಿತ್ತು. ತಾಲಿಬಾನ್ ಸಂಘಟನೆಯ ವಿರುದ್ಧವೂ ಧೈರ್ಯದಿಂದ ಹೋರಾಡಿ ಸಾಹಸ ಮೆರೆದಿದ್ದರು. ಕಳೆದ 2012ರಲ್ಲಿ ಮಹಿಳೆಯರಿಗೆ ಶಿಕ್ಷಣ ನಿರಾಕರಿಸುತ್ತಿದ್ದ ತಾಲಿಬಾನ್ ಪ್ರಯತ್ನದ ವಿರುದ್ಧ ಅಭಿಯಾನ ನಡೆಸುತ್ತಿದ್ದ ವೇಳೆ ಇವರ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿತ್ತು. ಆದರೆ ಮಲಾಲಾ ಅದೃಷ್ಟವಶಾತ್ ಪಾರಾಗಿದ್ದರು.
