
ಬೆಂಗಳೂರು : ರಾಜ್ಯ ಸರಕಾರ ಸಾರ್ವಜನಿಕ ಹಿತಾಸಕ್ತಿಯಿಂದ ವಿಧಿಸಿರುವ ಕೋವಿಡ್ ನಿರ್ಬಂಧ ಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಹಾಗೂ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಉದ್ದೇಶಿತ ಪಾದಯಾತ್ರೆ ಬಗ್ಗೆ ಮರು ಆಲೋಚಿಸಿ, ಮುಂದಕ್ಕೆ ಹಾಕುವಂತೆ ಕಿವಿ ಮಾತು ಹೇಳಿದ್ದಾರೆ. ಈ ನಡುವೆ, ಗೃಹ ಸಚಿವರ ಈ ಮಾತು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿದ್ದು, ಮೇಕೆದಾಟು ಪಾದಯಾತ್ರೆ ಮಾಡೇ ಮಾಡುತ್ತೇವೆ. ತಾಕತ್ತಿದ್ದರೆ ಸರ್ಕಾರ ತಡೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಆತಂಕಕಾರಿಯಾಗಿ, ಉಲ್ಬಣಗೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಿರಿಯರು, ತಮಗಿರುವ ಅನುಭವ ಹಾಗೂ ಹಿರಿತನದ ಹಿನ್ನೆಲೆಯಲ್ಲಿ ಸರಕಾರದ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕೋವಿಡ್ ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ, ನಗರದಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಮೂರು ದಿನಗಳ ಪಕ್ಷದ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿಕೊಳ್ಳಲಾಗಿದೆ. ಕಾಂಗ್ರೆಸ್ ಸಹ ತಮ್ಮ ಕಾರ್ಯಕ್ರಮ ಮುಂದೂಡಲಿ ಎಂದು ಸಲಹೆ ನೀಡಿದರು.



