
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. 75 ವರ್ಷಗಳಿಂದ 36 ಭಾಷೆಗಳಲ್ಲಿ ಹಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಅಷ್ಟು ಯಶಸ್ಸು ಕಂಡರೂ ಸಹ ಅವರ ವೈಯಕ್ತಿನ ಜೀವನವೇನೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇರಲಿಲ್ಲ. ಅವರು ಇಷ್ಟೆಲ್ಲ ಸಾಧನೆ ಮಾಡಿದರೂ ಸಹ ಕೊನೆಯವರೆಗೂ ಮದುವೆ ಆಗಿರಲಿಲ್ಲ. ಇದಕ್ಕೆ ಕಾರಣವೂ ಇತ್ತಂತೆ.
ಇನ್ನು ಅವರು ತಮ್ಮ 13 ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದರು. ಹೀಗಾಗಿ ಅಮ್ಮ, ತಂಗಿಯರು ಹಾಗೂ ತಮ್ಮನ ಜವಾಬ್ದಾರಿಯನ್ನು ಹೊತ್ತ ಲತಾ ಮಂಗೇಶ್ಕರ್ ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ನಾಟಕ, ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಳಿಕ ಗಾಯಕಿಯಾಗಿ ಪ್ರಸಿದ್ಧಿ ಪಡೆದ ಅವರು ತಮ್ಮ-ತಂಗಿಯರಿಗೆ ಮದುವೆ ಮಾಡಿದರು.ಆದರೆ ಲತಾ ಮಂಗೇಶ್ಕರ್ ಅವರು ಕೊನೆಗೂ ಮದುವೆಯಾಗದೆ ಉಳಿದಿದ್ದರು.
ಅಂದಹಾಗೆ ಲತಾ ಮಂಗೇಶ್ಕರ್ ಅವರು ಒಂಟಿಯಾಗಿರುವುದಕ್ಕೆ ಪ್ರೇಮ ವೈಫಲ್ಯವೂ ಒಂದು ಕಾರಣವಂತೆ. ಕೆಲ ವರದಿ ಪ್ರಕಾರ, ಗಾಯಕಿ ಲತಾ ಮಂಗೇಶ್ಕರ್ ಪ್ರೀತಿಸಿದ್ದ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಾಗದ ಕಾರಣದಿಂದ ಅವರು ತನ್ನ ಜೀವನದಲ್ಲಿ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದರು.
ಮೊದಲಿನಿಂದಲೂ ಲತಾ ಮಂಗೇಶ್ಕರ್ ಅವರಿಗೆ ಕ್ರಿಕೆಟ್ ಅಂದರೆ ಅಚ್ಚು ಮೆಚ್ಚು. ಅಷ್ಟೇ ಅಲ್ಲದೆ ಲತಾ ಮಂಗೇಶ್ಕರ್ ಅವರಿಗೆ ಸಚಿನ್ ತೆಂಡೂಲ್ಕರ್ ಎಂದರೆ ಬಹು ಪ್ರೀತಿ. ಅವರು ನಿವೃತ್ತಿ ತೆಗೆದುಕೊಂಡಾಗ ಲತಾ ಬಹಳ ಬೇಸರ ವ್ಯಕ್ತಪಡಿಸಿದ್ದರು. ಆಗಾಗ ಬಿಡುವು ಸಿಕ್ಕಾಗ ಕ್ರಿಕೆಟ್ ನೋಡುವ ಅಭ್ಯಾಸವಿದ್ದ ಲತಾ ಮಂಗೇಶ್ಕರ್ ಅವರಿಗೆ ಕ್ರಿಕೆಟ್ ಮಾತ್ರವಲ್ಲ ಆ ಕಾಲದ ಖ್ಯಾತ ಕ್ರಿಕೆಟಿಗರೊಬ್ಬರ ಮೇಲೂ ಪ್ರೀತಿ ಉಂಟಾಗಿತ್ತು.

ಬಿಸಿಸಿಐ ಮಾಜಿ ಅಧ್ಯಕ್ಷ ಮಹಾರಾಜ ರಾಜ್ ಸಿಂಗ್ ಡುಂಗರ್ಪುರ್ ಅವರನ್ನು ಲತಾ ಮಂಗೇಶ್ಕರ್ ಬಹಳ ಪ್ರೀತಿಸುತ್ತಿದ್ದರು. ಲತಾರನ್ನು ಕಂಡರೆ ರಾಜ್ ಸಿಂಗ್ ಅವರಿಗೂ ಪ್ರೀತಿಯಿತ್ತು. ಲತಾ ಮಂಗೇಶ್ಕರ್ ಅವರ ತಮ್ಮನಾಗಿದ್ದ ಹೃದಯನಾಥ್ ಮಂಗೇಶ್ಕರ್ ಹಾಗೂ ಕ್ರಿಕೆಟಿಗ ರಾಜ್ ಸಿಂಗ್ ಆತ್ಮೀಯ ಸ್ನೇಹಿತರಾಗಿದ್ದರು. ಮಾಜಿ ಕ್ರಿಕೆಟಿಗ ರಾಜ್ ಸಿಂಗ್ ರಾಜಸ್ಥಾನದ ರಾಜಮನೆತನಕ್ಕೆ ಸೇರಿದವರಾಗಿದ್ದರು. ಡುಂಗರ್‌ಪುರದ ಅಂದಿನ ಆಡಳಿತಗಾರರಾಗಿದ್ದ ದಿವಂಗತ ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜೀಯವರ ಕಿರಿಯ ಪುತ್ರರಾಗಿದ್ದ ರಾಜ್ ಸಿಂಗ್ ತಾವು ಲತಾ ಮಂಗೇಶ್ಕರ್ ಅವರನ್ನು ಪ್ರೀತಿ ಮಾಡುತ್ತಿದ್ದ ವಿಷಯವನ್ನು ಮನೆಯಲ್ಲೂ ಹೇಳಿದ್ದರು. ಆದರೆ ರಾಜ ವಂಶಸ್ಥರಾಗಿದ್ದ ರಾಜ್ ಸಿಂಗ್ ಜನಸಾಮಾನ್ಯರನ್ನು ಮದುವೆಯಾಗುವಂತಿಲ್ಲ ಎಂಬ ಕಾರಣದಿಂದ ಅವರ ತಂದೆ ಈ ಮದುವೆಗೆ ಒಪ್ಪಿರಲಿಲ್ಲ.
ರಾಜ್ ಸಿಂಗ್ ಅವರು ತನ್ನ ತಂದೆಯ ಮೇಲಿನ ಅಪಾರ ಪ್ರೀತಿ. ಹೀಗಾಗಿ ಅವರು ತಂದೆಯ ನಿರ್ಧಾರವನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದರು. ಹಾಗೇ ನಾನು ಲತಾಳನ್ನು ಮದುವೆಯಾಗಬಾರದು ಎಂದ ಮೇಲೆ ಇನ್ಯಾವ ಹುಡುಗಿಯನ್ನೂ ಮದುವೆಯಾಗುವುದಿಲ್ಲ ಎಂದು ಅಪ್ಪನ ಮುಂದೆ ಪ್ರತಿಜ್ಞೆ ಕೂಡ ಮಾಡಿದರು. ಹೀಗಾಗಿ, ಕೊನೆಯವರೆಗೂ ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಯಾರನ್ನೂ ಮದುವೆಯಾಗಲಿಲ್ಲ. ಅವರಿಬ್ಬರೂ ಉತ್ತಮ ಸ್ನೇಹಿತರಾಗೇ ಕೊನೆಯವರೆಗೂ ಉಳಿದರು.



