Latestಮೆಟ್ರೋರಾಜಕೀಯ

ಮತದಾನ ಪಟ್ಟಿಯಿಂದ ಬಿಜೆಪಿ ಕೈಬಿಟ್ಟಿರುವ ಹೆಸರುಗಳ ಮರು ಸೇರ್ಪಡೆಗೆ ಯತ್ನ : ಡಿಕೆ ಶಿವಕುಮಾರ್​

ಬೆಂಗಳೂರು: ಬಿಜೆಪಿ ಕೈಬಿಟ್ಟಿರುವ ಅಲ್ಪಸಂಖ್ಯಾತರ ಮತಗಳನ್ನು ಮತ್ತೆ ಮತದಾರರ ಪಟ್ಟಿಯಲ್ಲಿ ಸೇರಿಸಿ ಅವರಿಗೆ ಮತ್ತೆ ಮತದಾನದ ಹಕ್ಕು ದೊರಕಿಸಲು ಹೋರಾಡಲಾಗುವುದು. ಇದರ ಹೊಣೆಯನ್ನು ಮಾಜಿ ಸಚಿವ ನಸೀರ್ ಅಹ್ಮದ್ ಅವರಿಗೆ ವಹಿಸಲು ಉದ್ದೇಶಿಸಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅರಮನೆ ಆವರಣದ ನಲಪಾಡ್ ಸಭಾಂಗಣದಲ್ಲಿ ನಡೆದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು, ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರು, ದಲಿತರ ಮತಗಳನ್ನು ಕಿತ್ತುಹಾಕುವ ಮೂಲಕ ಅವರನ್ನು ಮತದಾನದ ಹಕ್ಕಿನಿಂದ ವಂಚಿಸಲು ಯತ್ನಿಸಿದ್ದಾರೆ ಎಂದು ದೂರಿದರು.

ಬಿಜೆಪಿಯವರು ಧಾರ್ಮಿಕ ಅಲ್ಪಸಂಖ್ಯಾತರನ್ನು ಬೇಕೆಂತಲೇ ಕೆರಳಿಸಲು ಮನಸ್ಸಿಗೆ ಚುಚ್ಚುವಂತೆ ಮಾತನಾಡುತ್ತಾರೆ. ಚಿಂತೆ ಮಾಡಬೇಡಿ. ರಾಷ್ಟ್ರಪತಿಗಳು ರಾಜ್ಯಕ್ಕೆ ಬಂದು ವಿಧಾನಸೌಧದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿ ಅವರ ಬಗ್ಗೆ ಮಾತನಾಡಿದವರಿಗೆ ಉತ್ತರ ನೀಡಿದ್ದರು ಎಂದರು.

ಹಾನಗಲ್, ಸಿಂದಗಿಯಲ್ಲಿ ನೀವು ಐಕ್ಯತೆ ಪ್ರದರ್ಶಿಸಿ ಈ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದಿರಿ. ಅದನ್ನೇ ನೀವು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅವರು ನಾವೆಲ್ಲಾ ಹಿಂದೂ, ನಾವೆಲ್ಲಾ ಮುಂದು ಎಂದು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ನಾವು ಹಿಂದೂ, ಸಿಖ್, ಕ್ರೈಸ್ತ, ಮುಸಲ್ಮಾನರು, ಜೈನರು ಎಲ್ಲ ವರ್ಗದ ಜನ ಸೇರಿ ಒಂದು ಎನ್ನುತ್ತೇವೆ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ನಾವು ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಕಾಂಗ್ರೆಸ್ ಪಕ್ಷ ದೇಶದ ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದರು.

ಕಾಂಗ್ರೆಸ್ ಪಕ್ಷ ಒಂದು ಸಮುದಾಯ ಅಥವಾ ವರ್ಗಕ್ಕೆ ಸೇರಿದ ಪಕ್ಷವಲ್ಲ. ನಿಮಗಾಗಿ ನಾವು, ನಮಗಾಗಿ ನೀವು. ಕಾಂಗ್ರೆಸ್ ಕೇವಲ ಒಂದು ವರ್ಗಕ್ಕೆ ಸೇರಿಲ್ಲ. ರೈತರು, ಕಾರ್ಮಿಕರು, ಯುವಕರು, ಮಹಿಳೆಯರು, ಅಸಂಘಟಿತ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಹೀಗೆ ಎಲ್ಲರಿಗೂ ಸೇರಿದ ಪಕ್ಷ ಎಂದು ಶಿವಕುಮಾರ್ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button