ಕನ್ನಡಪರ ಸಂಘಟನೆಗಳಿಂದ ಡಿ.31 ಕರ್ನಾಟಕ ಬಂದ್
ಬೆಂಗಳೂರು: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನೆ ಪುಂಡಾಟಿಕೆ ವಿರುದ್ಧ ಕನ್ನಡ ಪರ ಸಂಘನೆಗಳು ಡಿ.31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಡಿ.31ರ ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಂದ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 70 ವರ್ಷಗಳಿಂದ ಕನ್ನಡಿಗರ ಮೇಲೆ ಎಂಇಎಸ್ ದೌರ್ಜನ್ಯ ಎಲ್ಲೆ ಮೀರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂಬುದು ನಾಡಿನ ಕನ್ನಡಪರ ಸಂಘಟನೆಗಳ ಪ್ರಮುಖ ಹಕ್ಕೋತ್ತಾಯ. ಎಲ್ಲಾ ಕನ್ನಡಿಗರು ಬಂದ್ ನ್ನು ಬೆಂಬಲಿಸಬೇಕು. ನಾಡು-ನುಡಿಯ ರಕ್ಷಣೆಗೆ ಕನ್ನಡಿಗರು ತಮ್ಮ ಒಗ್ಗಟ್ಟಿನ ವಿರಾಟ್ ಶಕ್ತಿ ಪ್ರದರ್ಶಿಸುವ ಮೂಲಕ ಕರ್ನಾಟಕ ಬಂದ್ ನ್ನು ಬೆಂಬಲಿಸಬೇಕು ಎಂದು ಜನತೆಯಲ್ಲಿ ಅವರು ಮನವಿ ಮಾಡಿದರು.
ಸುಮಾರು 25ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಈಗಾಗಲೇ ಬಂದ್ ಗೆ ಬೆಂಬಲ ಸೂಚಿಸಿವೆ ಎಂದು ಹೇಳಿದ ವಾಟಾಳ್ ನಾಗರಾಜ್, ಅಧಿಕಾರ ಶಾಶ್ವತ ಅಲ್ಲ. ಆಡಳಿತರೂಢ ಬಿಜೆಪಿ ಸರ್ಕಾರ ಎಂಇಎಸ್ ನಿಷೇಧಿಸುವ ಕುರಿತು ಕಠಿಣ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಎಂಇಎಸ್ ಸಂಘಟನೆ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಗಡುವು ನೀಡಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಬಂದ್ ನಿರ್ಧಾರ ಮಾಡಲಾಗಿದೆ ಎಂದು ವಾಟಾಳ್ ಹೇಳಿದರು.
ರಾಜ್ಯದಲ್ಲಿ ಕನ್ನಡ ಹೋರಾಟಗಾರರಿಂದ ಮಾತ್ರ ಕನ್ನಡ ಉಳಿದಿದೆ. ಡಿಸೆಂಬರ್ 29ರ ಒಳಗೆ ಎಂಇಎಸ್ ಸಂಘನೆ ನಿಷೇಧಿಸಬೇಕು. ಇದು ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳು ನೀಡುವ ಮತ್ತೊಂದು ಡೆಡ್ ಲೈನ್. ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಬೆಳಗಾವಿ ರಾಜಕಾರಣಿಗಳು ಎಂಇಎಸ್ ಸಂಘಟನೆಯ ಏಜೆಂಟ್ ಗಳ ರೀತಿ ವರ್ತಿಸುತ್ತಿದ್ದಾರೆ. ತಕ್ಷಣ ಅದನ್ನು ನಿಲ್ಲಿಸಿ ಕನ್ನಡಿಗರ ಪರ ಗಟ್ಟಿ ನಿಲುವು ತಾಳಬೇಕು. ಕನ್ನಡ ಬಾವುಟಕ್ಕೆ ಬೆಂಕಿ ಇಡುವುದೆಂದರೆ ಅರ್ಥ ಕನ್ನಡಿಗರಿಗೆ ಬೆಂಕಿ ಇಟ್ಟಹಾಗೆ ಎಂದರು.
ಅಗತ್ಯ ವಸ್ತುಗಳಿಗೆ ತೊಂದರೆ ಇಲ್ಲ: ಕರ್ನಾಟಕ ಬಂದ್ ದಿನವಾದ ಡಿ.31ರಂದು ಜನರಿಗೆ ಹಾಲು, ಪೇಪರ್, ಆರೋಗ್ಯ ಸೇವೆಗಳು ಸೇರಿದಂತೆ ಅಗತ್ಯ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಇನ್ನು ಹೊಸ ವರ್ಷ ಮುನ್ನಾದಿನವಾಗಿದ್ದು, ಹೊಸ ವರ್ಷಾಚರಣೆ ಮಾಡುವವರು ಹೇಗಿದ್ದರೂ ಸಾಯಂಕಾಲವಲ್ಲವೇ ಮಾಡುವುದು, ಹಾಗಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ಯಾವುದೇ ತೊಂದರೆ ಇಲ್ಲ ಎಂದು ವಾಟಾಳ್ ಸ್ಪಷ್ಟಪಡಿಸಿದರು.
ಬಂದ್ ದಿನಾಂಕ ಕುರಿತು ಆಕ್ಷೇಪ: ಡಿಸೆಂಬರ್ 31ರಂದು ಹೊಸ ವರ್ಷ ಮುನ್ನಾದಿನವಾಗಿದ್ದು ಅಂದು ಬಂದ್ ಮಾಡುವ ಬದಲು ಡಿ.30ರಂದೋ, ಇನ್ನೊಂದು ದಿನ ಬಂದ್ ದಿನಾಂಕ ನಿಗದಿಪಡಿಸಬೇಕು ಎಂದು ವಂದೇ ಮಾತರಂ ಸಂಘಟನೆಯ ಶಿವ ಕುಮಾರ್ ಮತ್ತು ಬೆಂಬಲಿಗರು ಸುದ್ದಿಗೋಷ್ಠಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಕೆಲಕಾಲ ಗದ್ದಲ-ಗೊಂದಲದ ವಾತಾವರಣ ಏರ್ಪಟ್ಟಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸಾ ರಾ ಗೋವಿಂದ್, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
