Latestಮೆಟ್ರೋರಾಜ್ಯಸಿನಿಮಾಸುದ್ದಿ

ಮೇಕೆದಾಟು ಪಕ್ಷಾತೀತ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮದ ಬೆಂಬಲ

ಬೆಂಗಳೂರು: ಕಾಂಗ್ರೆಸ್ ಪಕ್ಷ ಇದೇ ಜ.9ರಿಂದ ನಡೆಸಲು ಉದ್ದೇಶಿಸಿರುವ ಮೇಕೆದಾಟು ಪಾತ್ರೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ವ್ಯಕ್ತಪಡಿಸಿದೆ. ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲವಿದೆ ಎಂದು ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್ ಹೇಳಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ನಮ್ಮ ಹಕ್ಕು.ಅದನ್ನು ಉಳಿಸಿಕೊಳ್ಳಲು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟವನ್ನು ಚಿತ್ರೋದ್ಯಮ ಬೆಂಬಲಿಸಿದೆ ಎಂದರು.

ಹೋರಾಟದ ನೇತೃತ್ವ ವಹಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಡಳಿ ಕಚೇರಿಗೆ ಬಂದು ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಪಕ್ಷಾತೀತ ಹೋರಾಟವಾದ್ದರಿಂದ ನಾವೂ ಬೆಂಬಲಿಸಲು ನಿರ್ಧರಿಸಿದ್ದೇವೆ. ಕಲಾವಿದರೂ ಕೂಡ ಹೋರಾಟದಲ್ಲಿ ಭಾಗವಹಿಸಬೇಕು ಎಂಬುದು ಮಂಡಳಿ ಇಚ್ಚೆ. ಅವರನ್ನು ವ್ಯಯಕ್ತಿಕವಾಗಿ ಪತ್ರ ಬರೆದು ಹಾಗೂ ಪತ್ರ ಮುಖೇನ ಮನವಿ ಮಾಡಿದ್ದೇವೆ ಎಂದೂ ಅವರು ತಿಳಿಸಿದರು.

ಪ್ರಸಕ್ತ ಕೋವಿಡ್ ಪರಿಸ್ಥಿತಿಯಲ್ಲಿ ವ್ಯಯಕ್ತಿಕವಾಗಿ ಭಾಗವಹಿಸುವುದು ಕಷ್ಟವಾಗಬಹುದು. ನೈತಿಕವಾಗಿ ಹೋರಾಟ ಬೆಂಬಲಿಸುತ್ತೇವೆ ಎಂದು ಹಲವು ಕಲಾವಿದರು ಈಗಾಗಲೇ ತಿಳಿಸಿದ್ದಾರೆ ಎಂದರು.

ಹತ್ತು ದಿನಗಳ ಮೇಕೆದಾಟು ಪಾದಯಾತ್ರೆಯಲ್ಲಿ ನಿಗದಿತ ದಿನವೇ ಭಾಗವಹಿಸಬೇಕೆಂದೇನೂ ಇಲ್ಲ. ಅನುಕೂಲವಿದ್ದ ದಿನ ಪಾಲ್ಗೊಳ್ಳಬಹುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರನ್ನು ಕೋರಲಾಗಿದೆ ಎಂದು ಅವರು ಹೇಳಿದರು.

ಪಾದಯಾತ್ರೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ನಾಡು, ನುಡಿ, ಗಡಿ ಮತ್ತು ಜಲದ ವಿಚಾರಗಳು ಪಕ್ಷಾತೀತ. ಕನ್ನಡ ಚಿತ್ರೋದ್ಯಮದ ಎಲ್ಲಾ ಸಂಸ್ಥೆಗಳು ಹೋರಾಟದಲ್ಲಿ ಕೋವಿಡ್ ಪರಿಸ್ಥಿತಿ, ಸರ್ಕಾರದ ಮಾರ್ಗಸೂಚಿ ಮತ್ತು ತಮ್ಮ ಅನುಕೂಲ ನೋಡಿಕೊಂಡು ಭಾಗವಹಿಸಬಹುದು ಅಥವಾ ಹೋರಾಟಕ್ಕೆ ಸಾಮಾಜಿಕ ಜಾಲತಾಣ , ಮಾಧ್ಯಮಗಳ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಬಹುದು ಎಂದರು.

ಇದು ರಾಜಕೀಯ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ ಅಲ್ಲ. ಯೋಜನೆ ಅನುಷ್ಠಾನ ಮಂದಗತಿಯಲ್ಲಿರುವುದರಿಂದ ತ್ವರಿತವಾಗಿ ಅನುಮೋದನೆ ನೀಡಿ ಯೋಜನೆ ಕಾರ್ಯಗತ ಮಾಡಬೇಕು ಎಂಬುದಷ್ಟೆ ನಮ್ಮ ಹಕ್ಕೋತ್ತಾಯ ಎಂದೂ ಅವರು ಹೇಳಿದರು.

ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ, ಜನರಿಗಾಗಿ ನಡೆದಿರುವ ಹೋರಾಟಕ್ಕೆ ಬಹಿರಂಗ ಬೆಂಬಲ ನೀಡುವ ಮೂಲಕ ಸಮಾಜದ ಋಣ ತೀರಿಸುವ ಅವಕಾಶ ಇದಾಗಿದೆ. ಕನ್ನಡ ಚಿತ್ರೋದ್ಯಮದ ಪ್ರತಿಯೊಬ್ಬರು ತಮ್ಮ ತಮ್ಮ ನೆಲೆಯಲ್ಲಿ ಹೋರಾಟ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button