
ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಯಾತ್ರೆಗಳಿಗೆ ಸೆಡ್ಡು ಎಂಬಂತೆ ಜೆಡಿಎಸ್ ಇದೇ ಜ.26ರಿಂದ ರಾಜ್ಯವ್ಯಾಪಿ “ಜನತಾ ಜಲಧಾರೆ” ರಥಯಾತ್ರೆ ಹಮ್ಮಿಕೊಂಡಿದೆ. ರಾಜ್ಯದ ಎಲ್ಲಾ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮಹಾ ಸಂಕಲ್ಪ ಇದರ ಹಿಂದಿನ ಉದ್ದೇಶ ಎಂದು ಮಾಜಿ ಸಿಎಂ, ಜೆಡಿಎಸ್ ಧುರೀಣ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ ಜನತಾ ಜಲಧಾರೆಗೆ ಹೊರಡಲಿರುವ ಗಂಗಾ ರಥವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅನಾವರಣಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಅತಿವೃಷ್ಟಿ- ಅನಾವೃಷ್ಟಿಗೆ ತುತ್ತಾಗುವ ನಮ್ಮ ರಾಜ್ಯವನ್ನು ಜಲಶ್ಯಾಮಲಗೊಳಿಸುವ ಹಾಗೂ ಕುಡಿವ ನೀರು ಒದಗಿಸುವ ಕನಸು ನಮ್ಮದು ಎಂದರು.
ಗಂಗಾಪೂಜೆ
15 ದಿನಗಳ ಯಾತ್ರೆ ಸಂದರ್ಭದಲ್ಲಿ ಪಕ್ಷದ ದೃಷ್ಟಿ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ವಿವರಿಸಲಾಗುವುದು. ಪವಿತ್ರ ಗಂಗಾಜಲವನ್ನು ಕಲಶಗಳಲ್ಲಿ ಸಂಗ್ರಹಿಸಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬರಮಾಡಿಕೊಂಡು ಗಂಗಾಪೂಜೆ ನೆರೆವೇರಿಸಲಾಗುವುದೂ ಎಂದು ಅವರು ತಿಳಿಸಿದರು.
ಜ.23ಕ್ಕೆ ಗಂಗಾ ರಥಗಳಿಗೆ ಹಸಿರು ನಿಶಾನೆ
ಜನವರಿ 23ರಂದು ರಾಮನಗರದ ಚಾಮುಂಡೇಶ್ವರಿ ಅಮ್ಮನವರ ದೇಗುಲದಿಂದ ರಾಜ್ಯದ 15 ದಿಕ್ಕುಗಳಿಗೆ ಹೊರಡುವ ಗಂಗಾ ರಥಗಳಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಚಾಲನೆ ನೀಡುವರು. ಜ.26ರಿಂದ ಇಷ್ಟೂ ವಾಹನಗಳಲ್ಲಿ ಅಳವಡಿಸಲಾಗಿರುವ ಕಲಶಗಳ ಮೂಲಕ ಪೂರ್ವ ನಿಗದಿ ಮಾಡಲಾಗಿರುವ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಗೆ ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರ, ತುಂಗಭದ್ರಾ, ಶರಾವತಿ, ಅಘನಾಶಿನಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ, ಉತ್ತರ ಪಿನಾಕಿನಿ, ಚಿತ್ರಾವತಿ ಸೇರಿ 15 ಸ್ಥಳಗಳಲ್ಲಿ ಮೊದಲ ದಿನ ಜಲ ಸಂಗ್ರಹ ಮಾಡಲಾಗುವುದು. ಜಲಸಂಗ್ರಹದ ದಿನ ಪಕ್ಷದ ಎಲ್ಲಾ ಪ್ರಮುಖರು ಭಾಗವಹಿಸುವರು ಎಂದರು.
ಒಟ್ಟು 51 ಕಡೆ ಜಲ ಸಂಗ್ರಹ
ಇಡೀ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹಿಸಲಾಗುವುದು. ರಾಜ್ಯದ 180 ವಿಧಾನಸಭೆ ಕ್ಷೇತ್ರಗಳು, 140 ತಾಲ್ಲೂಕು ಕೇಂದ್ರಗಳಲ್ಲಿ ಈ ಕಲಶಗಳು ಹಾದು ಹೋಗಲಿದ್ದು, ಎಲ್ಲೆಡೆ ಜಲ ತುಂಬಿದ ಕಲಶಗಳ ಮೆರೆವಣಿಗೆ, ಕಲಾ ತಂಡಗಳ ಮೆರಗು, ಮಂಗಳವಾದ್ಯಗಳ ಮೇಳ, ಕಲಶಗಳೊಂದಿಗೆ ಮಹಿಳೆಯರ ನಡಿಗೆ ನಡೆಯಲಿದೆ. ನಿತ್ಯ 15 ಕಡೆ ಇಂಥ ಕಾರ್ಯಕ್ರಮಗಳು ನಡೆಯಲಿವೆ. ಯಾತ್ರೆ ಮುಗಿದ ನಂತರ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ಗಂಗಾಆರತಿ ನೆರವೇರಿಸಲಾಗುವುದು, ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಲ್ಲಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು ಜತೆಗೆ ವರ್ಷವಿಡೀ ಗಂಗಾಪೂಜೆ ಹಮ್ಮಿಕೊಳ್ಳಲಾಗುವುದು ಎಂದೂ ಕುಮಾರಸ್ವಾಮಿ ತಿಳಿಸಿದರು.



