
ಶಾರ್ಜಾ : ಈ ಬಾರಿಯ ಐಪಿಎಲ್ ನಲ್ಲೇ ಅತ್ಯಂತ ರೋಚಕ ಎನ್ನಬಹುದಾದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 3 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಕೋಲ್ಕೊತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಡೆಲ್ಲಿ ನೀಡಿದ 136 ರನ್ ಗಳ ಸಲಭ ಮೊತ್ತವನ್ನು ಬೆಂಬತ್ತಿದ ಕೆಕೆಆರ್ ಗೆ ಒಂದು ಹಂತದಲ್ಲಿ 25 ಎಸೆತಗಳಿಂದ ಕೇವಲ 13 ರನ್ ಗಳಿಸಬೇಕಾಗಿತ್ತು. ಆದರೆ 3.5 ಓವರ್ ಗಳಲ್ಲಿ 7 ರನ್ಗಳಿಸುವಷ್ಟರಲ್ಲಿಯೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಶ್ವಿನ್ ಎಸೆದ ಕೊನೆಯ ಓವರ್ ನಲ್ಲಿ 7 ರನ್ ಗಳಿಸಿಬೇಕಾಗಿತ್ತು. ಅಶ್ವಿನ್ ನಾಲ್ಕು ಎಸೆತಗಳಲ್ಲಿ ಕೇವಲ 1 ರನ್ ನೀಡಿದ್ದರು.
ಉಳಿದ ಎರಡು ಎಸೆತಗಳಲ್ಲಿ ಡೆಲ್ಲಿಗೆ 6 ರನ್ ಅಗತ್ಯವಿದ್ದಿತ್ತು. ಅದು ಅಶ್ವಿನ್ ಪಾಲಿಗೆ ಹ್ಯಾಟ್ರಿಕ್ ಅವಕಾಶ. ಆದರೆ ರಾಹುಲ್ ತ್ರಿಪಾಟಿ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನು ಫೈನಲ್ ಗೆ ಕೊಂಡೊಯ್ದರು.
55 ರನ್ ಗಳಿಸಿದ ವೆಂಕಟೇಶ ಪಂದ್ಯಶ್ರೇಷ್ಠರೆನಿಸಿದರು. ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ.



