Latestಕ್ರಿಕೆಟ್ಕ್ರೀಡೆ

IPL 2021: ಚೆನ್ನಾಗಿ ಆಡಿ ಗೆದ್ದ ಚೆನ್ನೈ: ಅಗ್ರ ಸ್ಥಾನಕ್ಕೇರಿದ ಧೋನಿ ಪಡೆ

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್ ಗಳ ಜಯ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ಸ್ ಪ್ರೀಮಿಯರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. 156 ರನ್ ಗಳ ಸಾಧಾರಣ ಮೊತ್ತವನ್ನು ಬೆಂಬತ್ತಿದ ಮುಂಬೈ ತಂಡ 136 ರನ್ ಗೆ 6 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಚೆನ್ನೈ ಜಯದಲ್ಲಿ ಋತುರಾಜ್ ಗಾಯಕ್ವಾಡ್ ಗಳಿಸಿದ 88ರನ್ ಜತೆಯಲ್ಲಿ ಡ್ವೇನ್ ಬ್ರಾವೋ ಅವರ ಸ್ಫೋಟಕ 23 ರನ್ ಹಾಗೂ ಬೌಲಿಂಗ್ ನಲ್ಲಿ ಗಳಿಸಿದ 3 ವಿಕೆಟ್ ಪ್ರಮುಖ ಪಾತ್ರ ವಹಿಸಿತು.

ಚೆನ್ನೈ ಸಾಧಾರಣ ಮೊತ್ತ:

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ (88) ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಅಮೂಲ್ಯ ಅರ್ಧ ಶತಕ ಸಿಡಿಸಿದರು.

58 ಎಸೆತಗಳನ್ನೆದುರಿಸಿದ ಗಾಯಕ್ವಾಡ್ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ತಂಡದ ಸಾಧಾರಣ ಮೊತ್ತಕ್ಕೆ ನೆರವಾದರು. ಕೊನೆಯ ಕ್ಷಣದಲ್ಲಿ ಡ್ವೇನ್ ಬ್ರಾವೋ (23) ಮತ್ತು ರವೀಂದ್ರ ಜಡೇಜಾ (26) ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.

ಫಾಫ್ ಡು ಪಗಲೆಸಿಸ್, ಮೊಯಿನ್ ಅಲಿ, ಅಂಬಾಟಿ ರಾಯುಡು ಖಾತೆ ತೆರೆಯದೆ ಪೆವಿಲಿಯನ್ ಸೇರಿದರೆ, ನಾಯಕ ಧೋನಿ (3) ಹಾಗೂ ಸುರೇಶ್ ರೈನಾ (4) ಕೂಡ ಬ್ಯಾಟಿಂಗ್ ಮರೆತು ಹೋದಂತೆ ಆಡಿದರು. ಮುಂಬೈ ಇಂಡಿಯನ್ ಪರ ಟ್ರೆಂಟ್ ಬೊಲ್ಟ್, ಆ್ಯಡಂ ಮಿಲ್ನೆ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಗಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button