
ಎಂ ಹೈದರ್
ಮಾರ್ಟಿನ್ ಲೂಥರ್ ಕಿಂಗ್ ರಿಂದ ಪ್ರಾರಂಭವಾಗಿ ಒಬಾಮಾ ರವರೆಗೂ ಅಮೇರಿಕಾದ ಹಲವು ನಾಯಕರು ಮಹಾತ್ಮ ಗಾಂಧಿ ಅವರಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆ ಅಥವ ಗೌರವವನ್ನು ಹೊಂದಿದವರಾಗಿದ್ದರು.
ಅಹಿಂಸೆ ಮತ್ತು ಸಹಬಾಳ್ವೆ ಮತ್ತು ಶಾಂತಿಯನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧಿ ಅವರ ತತ್ವಗಳು ಭಾರತಕ್ಕೆ ಮಾತ್ರವಲ್ಲ ಜಾಗತಿಕವಾಗಿ ಅದು ಒಂದು ಅಧ್ಯಯನ ಯೋಗ್ಯವಾಗಿ ಮತ್ತು ಬದುಕಿಗೆ ಅಳವಡಿಸಿ ಕೊಳ್ಳಬಹುದಾದ ವಿಚಾರವಾಗಿದೆ ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಹಲವು ನಾಯಕರು ಈ ಬಗ್ಗೆ ಸಂದರ್ಭ ಬಂದಾಗಲೆಲ್ಲ ಗಾಂಧೀಜಿಯವರನ್ನು ಸ್ಮರಿಸಿಕೊಂಡಿದ್ದಾರೆ. ಅದರಂತೆಯೇ ಮೂರು ದಿನಗಳ ಭೇಟಿಗಾಗಿ ಅಮೇರಿಕಾಕ್ಕೆ ತೆರಳಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ತತ್ವವನ್ನು ಅಮೇರಿಕಾದ ನಾಯಕರಿಂದ ಪಾಠ ಹೇಳಿಸಿಕೊಂಡ ದುರಿತ ಪರಿಸ್ಥಿತಿಯನ್ನು ಭಾರತ ಎದುರಿಸುವಂತಾಗಿದ್ದು ಭಾರತಕ್ಕೆ ಶೋಭೆ ತರುವಂತದ್ದಲ್ಲ ಇದು ನಿಜಕ್ಕೂ ತಲೆ ತಗ್ಗಿಸುವಂತದ್ದು.
ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾದ ಸಂದರ್ಭದಲ್ಲಿ ಕಮಲಾ ಹ್ಯಾರಿಸ್ ಅವರೊಂದಿಗಿನ ಮೊದಲ ಭೇಟಿಯಲ್ಲಿ ವೈಟ್ ಹೌಸ್ ನಲ್ಲಿ ಮಾತುಕತೆ ನಡೆದ ಸಂದರ್ಭದಲ್ಲಿ ಕಮಲಾ ಹ್ಯಾರಿಸ್ ಅವರು ಈ ದಿನಗಳಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ಪ್ರಜಾತಂತ್ರವನ್ನು ಮತ್ತು ಅದಕ್ಕೆ ಸಂಬಂಧ ಹೊಂದಿರುವ ಸಂಸ್ಥೆಗಳನ್ನು ದುರ್ಬಲ ಗೊಳಿಸುವ ಹುನ್ನಾರ ನಡೆಯುತ್ತಿದೆ ಇದನ್ನು ವಿಫಲಗೊಳಿಸಬೇಕಾಗಿದೆ ಪ್ರಜಾತಂತ್ರವನ್ನು ಕಾಪಾಡಬೇಕಿದೆ ಎಂದು ಮೋದಿಯ ಪಕ್ಕದಲ್ಲೇ ಕುಳಿತು ನೆನಪಿಸಿಕೊಂಡಿದ್ದು ಭಾರತದ ವಾಸ್ತವ ಸ್ಥಿತಿಯನ್ನು ಬೊಟ್ಟು ಮಾಡಿರುವುದಂತೂ ನಿಜ.
ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡ ಮೋದಿಗೆ ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ಉಲ್ಲೇಖಿಸಿ ಅಹಿಂಸೆ, ಸಹಿಷ್ಣುತೆ, ಪರಸ್ಪರ ಗೌರವದ ಭಾವನೆಗಳ ಅಪಾರ ಅರಿವು ಹೊಂದಿದ್ದ ಮಹಾತ್ಮ ಗಾಂಧಿ ಅವರ ವಿಚಾರ ಹಿಂದೆಂದಿಗಿಂತಲೂ ಈಗ ಬಹಳ ಅಗತ್ಯವಾಗಿದೆ ಎಂದು ಹೇಳುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವುದು ಗಾಂಧಿಯಿಂದಲೇ ಹೊರತು ಗೋಡ್ಸೆಯಿಂದಲ್ಲ ಎಂಬುವುದನ್ನು ನೆನಪಿಸುವಂತಾಗಿದ್ದು ಭಾರತ ಈಗ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುವುದರ ಬಗ್ಗೆ ಎಚ್ಚರಿಕೆ ನೀಡಿದಂತಿತ್ತು. ಬಹಳಷ್ಟು ಮಾಧ್ಯಮಗಳು ಈ ಬಗ್ಗೆ ಬೆಳಕು ಚೆಲ್ಲಲಿಲ್ಲ.
ಈ ಎಲ್ಲ ಕಾರಣದಿಂದಾಗಿಯೇ ಮೋದಿ ಸಂಯುಕ್ತ ರಾಷ್ಟ್ರಗಳ ಮಹಾಸಭೆಯಲ್ಲಿನ ತಮ್ಮ ಭಾಷಣದಲ್ಲಿ ಭಾರತವು ಪ್ರಜಾಪ್ರಭುತ್ವದ ತಾಯಿ ವಿವಿಧ ಸಂಸ್ಕೃತಿಗಳು, ವಿವಿಧ ವಿಚಾರಗಳು, ವಿವಿಧ ಭಾಷೆಗಳಿಂದಾಗಿ ಭಾರತದ ಪ್ರಜಾಪ್ರಭುತ್ವವು ಗಟ್ಟಿಯಾಗಿ ನಿಂತಿದೆ ಎಂದು ಹೇಳಬೇಕಾಯಿತು.
ಆದರೆ ಭಾರತದ ವಾಸ್ತವ ಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಪ್ರಶ್ನೆ ಮಾಡಿದವರನ್ನು ಜೈಲಿನ ದಾರಿ ತೋರಿಸಲಾಗುತ್ತಿದೆ, ಜಾತಿ ಧರ್ಮದ ಕಾರಣಕ್ಕಾಗಿ ಸಹ ಮಾನವರನ್ನು ಬಡಿದು ಕೊಲ್ಲಲಾಗುತ್ತಿದೆ, ಒಕ್ಕಲೆಬ್ಬಿಸಲಾಗುತ್ತಿದೆ, ಗುಂಪು ಹಲ್ಲೆ ನಡೆಸಿ ಹತ್ಯೆಗೈಯಲಾಗುತ್ತದೆ ಇಂತಹ ಘಟನೆಗಳಿಗೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸದೆ ಆಳುವ ಪ್ರಭುತ್ವವು ಪರೋಕ್ಷವಾಗಿ ಇವುಗಳನ್ನು ಬೆಂಬಲಿಸುವುದು ನಡೆಯುತ್ತಿದೆ, ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಹತ್ತು ತಿಂಗಳಿಂದ ನಡೆಯುತ್ತಿರುವ ಆಂದೋಲನವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರಿಗೆ ದೇಶ ದ್ರೋಹಿ ಪಟ್ಟ ಕಟ್ಟಲು ಕೂಡ ಹೇಸದೆ ಕಾರ್ಪೋರೆಟ್ ಉದ್ಯಮಿಗಳ ಹಿತ ಕಾಯಲು ಟೊಂಕ ಕಟ್ಟಿ ನಿಂತಿರುವ ಸಂದರ್ಭದಲ್ಲಿ ದೇಶವನ್ನು ಪ್ರಜಾಪ್ರಭುತ್ವ ತಾಯಿ ಎಂದು ಮೋದಿ ಸಂಯುಕ್ತ ರಾಷ್ಟ್ರಗಳ ಮಹಾಸಭೆಯಲ್ಲಿ ಭಾಷಣ ಮಾಡಿರುವ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಮೋದಿ ಬೆಂಬಲಿಗರಿಗೆ ಏನು ಅಪಥ್ಯವೋ ಅದನ್ನೆ ಮೋದಿ ತಮ್ಮ ಜಾಗತಿಕ ಭಾಷಣದಲ್ಲಿ ಹೇಳಬೇಕಾಗಿರುವುದು ವಿಪರ್ಯಾಸ.
ಅಪಘಾನಿಸ್ತಾನ ಮತ್ತು ಭಯೋತ್ಪಾದನೆಗಳ ಬಗ್ಗೆ ಅದರಲ್ಲೂ ತಾಲಿಬಾನ್ ಆಡಳಿತದ ಬಗ್ಗೆ ಹಲವು ದೇಶಗಳ ಮೌನವನ್ನು ಮೋದಿ ಕುಟುಕಿರುವುದು ಮತ್ತು ಕೆಲವು ದೇಶಗಳು ಭಯೋತ್ಪಾದನಾ ಕೃತ್ಯಗಳಲ್ಲಿ ತಮ್ಮ ಲಾಭವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿವೆ ಎಂದಿರುವುದು ಸಮುದ್ರ ಸಂಪನ್ಮೂಲ ಬಳಸಿಕೊಳ್ಳಬೇಕು. ವಿಶ್ವ ಸಂಸ್ಥೆ ಸುಧಾರಣೆ ಆಗಬೇಕು. ಅಫ್ಘಾನ್ ಬೆಳವಣಿಗೆಯ ಬಗೆಗಿನ ವಿಶ್ವಸಂಸ್ಥೆಯ ನಿಲುವಿನ ಬಗ್ಗೆ ಉಂಟಾಗಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಭಯೋತ್ಪಾದನೆಯನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ನರೇಂದ್ರ ಮೋದಿ ಹೇಳಿರುವುದು ಅಮೇರಿಕಾ ಭೇಟಿಯಲ್ಲಿನ ಇತರ ಗಮನಾರ್ಹ ಅಂಶಗಳಾಗಿವೆ



