ಸಮಾಜದಲ್ಲಿ ಪರಿವರ್ತನೆಯಾಗುವುದಾದರೆ ಡಿ.31 ರ ಬಂದ್ ಗೆ ಬೆಂಬಲ: ನಟ ನಿಖಿಲ್ ಕುಮಾರಸ್ವಾಮಿ

ಕೋಲಾರ : ಕ್ರಿಸ್ ಮಸ್ ಪ್ರಯುಕ್ತ ಡಿಸೆಂಬರ್ 24 ರಂದು ಶುಕ್ರವಾರ ನಟ ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರ ತೆರೆಕಂಡಿದ್ದು, ಚಿತ್ರದ ಪ್ರಚಾರಕ್ಕಾಗಿ ನಾರಾಯಣಿ ಚಿತ್ರಮಂದಿರಕ್ಕೆ ಯುವನಟ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದರು.
ಯುವ ನಟ ನಿಖಿಲ್ ಕುಮಾರಸ್ವಾಮಿ ಬರುತ್ತಿದ್ದಂತೆ ನಾರಾಯಣಿ ಚಿತ್ರಮಂದಿರದ ಸುತ್ತ ಅಭಿಮಾನಿಗಳು ಜಮಾಯಿಸಿದರು, ಈ ವೇಳೆ ಚಿತ್ರಮಂದಿರದ ಬಳಿ ಪಟಾಕಿ ಸಿಡಿಸಿ ಹೂ ಮಳೆ ಸುರಿಸುವ ಮೂಲಕ ನಿಖಿಲ್ ರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಚಿತ್ರಮಂದಿರದ ಒಳಗೆ ಪ್ರವೇಶಿಸುತ್ತಿದ್ದಂತೆ ನಿಖಿಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಂದಾದರು.
ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು, ಈ ವೇಳೆ ಮತನಾಡಿದ ನಿಖಿಲ್ ಬೆಂಗಳೂರು ಸೇರಿದಂತೆ ಇತರೆ ಕಡೆ ರೈಡರ್ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ, ಇದು ಕೌಟುಂಬಿಕ ಚಿತ್ರವಾಗಿದ್ದು ಎಲ್ಲರೂ ಇಷ್ಟಪಡುತ್ತಿದ್ದಾರೆ. ಕೋಲಾರ ಜಿಲ್ಲೆ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದೆ, ನಮ್ಮನ್ನು ಬಹಳಷ್ಟು ಬೆಳೆಸಿದ್ದಾರೆ ಎಂದರು.
ಇದೇ ವೇಳೆ ಎಂಇಎಸ್ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31 ರ ಕರ್ನಾಟಕ ಬಂದ್ ಗೆ ನಿಖಿಲ್ ಬೆಂಬಲ ವ್ಯಕ್ತಪಡಿಸಿದರು, ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನ ಹಾಗೋದಿದ್ರೆ ಬಂದ್ ಮಾಡಲಿ, ಆದರೆ, ಸುಮ್ಮನೆ ಮಾಧ್ಯಮದಲ್ಲಿ ಪ್ರಚಾರ ಪಡೆದುಕೊಳ್ಳಲು ಬಂದ್ ಸೀಮಿತವಾಗಬಾರದು, ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡುತ್ತೇವೆ. ಬಂದ್ ಮಾಡುವುದರಿಂದ ಸಮಾಜದಲ್ಲಿ ಪರಿವರ್ತನೆಯಾಗಬೇಕು ಎಂದು ತಿಳಿಸಿದರು.



