
ನವದೆಹಲಿ : ಕಾಂಗ್ರೆಸ್‌ನ ಪೂರ್ಣಾವಧಿ ಅಧ್ಯಕ್ಷರಾಗಿ(AICC President) ತಾವೇ ಮುಂದುವರಿಯುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪಕ್ಷದ ಪುನರುಜ್ಜೀವನವು ಏಕತೆ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಮೇಲೆ ಅವಲಂಬಿತವಾಗಿದೆ ಎಂದು ಎಲ್ಲಾ ಹಿರಿಯ ನಾಯಕರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇಡೀ ಸಂಸ್ಥೆ ಕಾಂಗ್ರೆಸ್ ನ ಪುನರುಜ್ಜೀವನವನ್ನು ಬಯಸುತ್ತದೆ. ಆದರೆ ಇದಕ್ಕೆ ಐಕ್ಯತೆ ಮತ್ತು ಪಕ್ಷದ ಹಿತಾಸಕ್ತಿಗಳನ್ನು ಪ್ರಮುಖವಾಗಿರಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅದಕ್ಕೆ ಸ್ವಯಂ ನಿಯಂತ್ರಣ ಮತ್ತು ಶಿಸ್ತು ಬೇಕು ಎಂದು ಹೇಳಿದರು.
ದೇಶದಲ್ಲಿ ದಿನೇ ದಿನೇ ದಿನೋಪಯೋಗಿ ವಸ್ತುಗಳ ಬೆಲೆ ಏರುತ್ತಿದೆ. ಜನರ ನಡುವೆ ಬಿಜೆಪಿ ಸರ್ಕಾರದ ವಿರುದ್ಧ ಅಲೆ ದೊಡ್ಡದಾಗುತ್ತಿದೆ. ಇಡೀ ದೇಶದ ರೈತ ಸಮೂಹ ಕೇಂದ್ರ ಸರ್ಕಾರದ ವಿರುದ್ಧ ನಿಂತಿದೆ. ಕಾಂಗ್ರೆಸ್ ಪಕ್ಷವನ್ನು ಬುಡದಿಂದ ಗಟ್ಟಿಗೊಳಿಸಲು ಇದು ಸೂಕ್ತ ಸಮಯ. ಈಗ ಪಕ್ಷ ಮರು ಸಂಘಟನೆ ನಡೆಸಿದರೆ ಕಾಂಗ್ರೆಸ್ ಖಚಿತವಾಗಿ ಮುಂದಿನ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.



