ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಮಕರ ಸಂಕ್ರಾಂತಿ ಸಂಭ್ರಮ : ಸಿದ್ದಾರೂಢ ಮಠಕ್ಕೆ ಹರಿದು ಬಂದ ಭಕ್ತ ಸಮೂಹ

ಹುಬ್ಬಳ್ಳಿ: ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಹಾಗೂ ವರ್ಷದ ಮೊದಲನೇಯ ಹಬ್ಬವಾದ ಮಕರ ಸಂಕ್ರಾಂತಿಯ ಹಬ್ಬವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಸಾರ್ವಜನಿಕರು, ಮಧ್ಯಾಹ್ನದ ನಂತರ ತಮ್ಮ ಕುಟುಂಬಸ್ಥರ ಸಮೇತವಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಸಿದ್ದಾರೂಢ ಮಠಕ್ಕೆ ಇಂದು ಭಕ್ತ ಸಮೂಹವೇ ಹರಿದು ಬರುತ್ತಿದೆ. ವರ್ಷದ ಮೊದಲನೆಯ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ, ಸಾರ್ವಜನಿಕರು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿ ಸಿದ್ದಾರೂಢರ ದರ್ಶನ ಪಡೆದುಕೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು. ಸಿದ್ದಾರೂಢರ ಮೂರ್ತಿಯ ದರ್ಶನಕ್ಕೆ ಭಕ್ತರು ಸರದಿ ಸಾಲಿನಲ್ಲಿ ಬಿಡಲಾಗುತ್ತಿದ್ದು, ಭಕ್ತರು ಕೂಡಾ ಶಾಂತ ರೀತಿಯಿಂದ ಸಾಲಿನಲ್ಲಿ ನಿಂತುಕೊಂಡು ದರ್ಶನ ಮಾಡಿಕೊಂಡರು. ಆದರೆ ಸರದಿ ಸಾಲಿನಲ್ಲಿ ನಿಂತ ಬಹುತೇಕ ಭಕ್ತರು ಸಮಾಜಿಕ ಅಂತರ ಹಾಗೂ ಮಾಸ್ಕ್ ಅನ್ನು ಮರೆತು ಬೇಜವಾಬ್ದಾರಿ ವರ್ತನೆ ಮಾಡುತ್ತಿರುವುದು ಮಠದ ಆಡಳಿತ ಮಂಡಳಿಗೆ ದೊಡ್ಡ ತಲೆ ನೋವಾಗಿರುವುದು ಸುಳ್ಳಲ್ಲ.
ಆವರಣದಲ್ಲಿ ಹಬ್ಬದ ಅಡುಗೆ ರುಚ್ಚಿ ಸವಿದ ಜನತೆ:
ಇನ್ನೂ ಮಕರ ಸಂಕ್ರಮಣ ಹಬ್ಬದ ವಿಶೇಷ ಅಡುಗೆಯೊಂದಿಗೆ ಮಠಕ್ಕೆ ಆಗಮಿಸಿದ ಹಲವು ಕುಟುಂಬಗಳು, ಹಬ್ಬದ ವಿಶೇಷ ಅಡುಗೆಯ ಸವಿರುಚ್ಚಿಯನ್ನು ಸವಿದ ಮಠದ ಆವರಣದಲ್ಲಿ ಕೆಲಕಾಲ ಸಮಯ ಕಳೆದರು. ಇನ್ನೂ ಹಲವು ಭಕ್ತಾದಿಗಳು ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ನಡೆಯುವ ಅನ್ನ ದಾಸೋಹದ ಪ್ರಸಾದವನ್ನು ಸ್ವೀಕರಿಸಿ, ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಒಟ್ಟಿನಲ್ಲಿ ಕೋವಿಡ್ ಮೂರನೆಯ ಅಲೆಯ ಮಧ್ಯಯು ವರ್ಷದ ಮೊದಲನೆಯ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಆದರೆ ಸಾರ್ವಜನಿಕರು ಹಬ್ಬದ ಮೂಡನಲ್ಲಿ ಕೊರೊನಾ ಮಾರ್ಗಸೂಚಿ ಮರೆತು ಬಿಟ್ಟಿರುವುದು ಕೊಂಚ ಜಿಲ್ಲಾಡಳಿತಕ್ಕೆ ತಲೆ ನೋವು ತಂದೊಡುತ್ತಿದೆ.



