
ಬೆಂಗಳೂರು: ಹೋಟೆಲ್, ರೆಸ್ಟೋರೆಂಟ್, ಮನರಂಜನಾ ಪಾರ್ಕ್, ರೆಸಾರ್ಟ್ ಗಳು (ಬಿಬಿಎಂಪಿ ಹೊರತುಪಡಿಸಿ) ಪಾವತಿಸುವ ಆಸ್ತಿ ತೆರಿಗೆಯಲ್ಲಿ ಷರತ್ತುಬದ್ಧ ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಪ್ರಸಕ್ತ ಹಣಕಾಸು ವರ್ಷಕ್ಕೆ ಇದು ಅನ್ವಯವಾಗಲಿದೆ.
ಕೆಟಿಟಿಎಫ್ ಕಾಯ್ದೆ 8-1ರ ಅನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಬೇಕು. ವೆಬ್ಸೈಟಿನಲ್ಲಿ ನೋಂದಣಿಯಾದ ಸದಸ್ಯರಿಗೆ ಈ ರಿಯಾಯಿತಿಯನ್ನು ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾಲೀಕರು ಶೇ.50ರಷ್ಟು ಆಸ್ತಿ ತೆರಿಗೆಯನ್ನು ಪಾವತಿಸಬೇಕು ಹಾಗೂ ರಿಯಾಯಿತಿ ಪಡೆಯಲು ಆದೇಶದ ಅನುಬಂಧದಲ್ಲಿ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ನಂತರ ಅರ್ಜಿಗಳನ್ನು ವರ್ಗವಾರು ಕಂದಾಯ ನಿರೀಕ್ಷಕರು ಪರಿಶೀಲನೆಗೊಳಿಸಬೇಕು. ರಿಯಾಯಿತಿ ನೀಡಲು ಸಲ್ಲಿಸಿದ ವಿವರವಾದ ವರದಿಯನ್ನು ಡಿಯುಡಿಸಿ ಅಥವಾ ಯುಎಲ್ಬಿ ಯೋಜನಾ ನಿರ್ದೇಶಕರು ಪರಿಶೀಲಿಸಬೇಕು. ಜಿಲ್ಲಾಮಟ್ಟದ ಸಮಿತಿಯು ಈ ಕ್ಲೇಮ್ ಬಿಲ್ಲುಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಲಾಗಿದೆ.



