ಗೃಹ ಸಚಿವರಾಗಿ ಕೆಲಸ ಮಾಡೋ ಜವಾಬ್ದಾರಿ ಆರಗ ಜ್ಞಾನೇಂದ್ರಗಿಲ್ಲ: ಹೆಚ್ ಡಿ ಕೆ

ಮೈಸೂರು: ಬೆಂಗಳೂರಿನಲ್ಲಿ ಮೊನ್ನೆ ನಡೆದ ಯುವಕನ ಹತ್ಯೆ ಪ್ರಕರಣ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಯುವಕನ ಕೊಲೆ ಪ್ರಕರಣವನ್ನು ಲಘುವಾಗಿ ಪರಿಗಣಿಸಬೇಡಿ. ಯುವಕ ಹಿಂದೂ ಸಮಾಜದ ಯುವಕ ಎಂದು ಸಚಿವರು ಹೇಳಲಿಲ್ಲ, ಆತ ದಲಿತ ಸಮಾಜದ ಯುವಕ ಎಂದು ಹೇಳಿದ್ರು. ಗೃಹ ಸಚಿವರ ಈ ಹೇಳಿಕೆಯನ್ನು ರಾಜ್ಯದ ಜನರು ಗಮನಿಸಬೇಕಿದೆ ಎಂದಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಹೆಚ್ ಡಿ ಕೆ ಪ್ರಕರಣವನ್ನು ಲಘುವಾಗಿ ಪರಿಗಣಿಸದಂತೆ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ಪ್ರಕರಣದ ಕುರಿತಾಗಿ ಗೃಹ ಸಚಿವರ ಹೇಳಿಕೆ ನೋಡಿದ್ದೀನಿ. ಘಟನೆ ನಡೆದ 24 ಗಂಟೆಯಲ್ಲಿ ಗೃಹ ಸಚಿವರು ಒಂದು ರೀತಿಯ ಹೇಳಿಕೆ ನೀಡಿದರೆ, ಪೊಲೀಸರು ಮತ್ತೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಮಾಹಿತಿ ಇಲ್ಲದೇ ಹೇಳಿಕೆ ಯಾಕೆ ನೀಡಬೇಕು. ಗೃಹ ಸಚಿವರು ಕಾಮಿಡಿಯನ್ ಅಥವಾ ವಿಲನ್ ರೋಲ್ ಮಾಡೋಕೇ ಬಂದಿದ್ದಾರಾ ಎಂದು ಕಿಡಿಕಾರಿದರು.
ಗೃಹ ಸಚಿವರ ಹೇಳಿಕೆ ಸಮಾಜದ ಶಾಂತಿಯನ್ನು ಹದಗೆಡಿಸುವ ರೀತಿಯಲ್ಲಿದೆ. ಗೃಹ ಸಚಿವರಾಗಿ ಕೆಲಸ ಮಾಡೋ ಜವಾಬ್ದಾರಿಯ ಅರಿವಿಲ್ಲ ಎಂದರು.
