ಸರ್ಕಾರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಅಸಮಾಧಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆದಿದ್ದು ಕೋವಿಡ್ ನಿಯಂತ್ರಣಕ್ಕೆ ಹೇರಿದ್ದ ಸಾಕಷ್ಟು ನಿರ್ಬಂಧಗಳನ್ನ ಸಡಿಲ ಮಾಡಲಾಗಿದೆ. ಆದ್ರೆ ಸಿನಿಮಾ ಥಿಯೇಟರ್ನಲ್ಲಿ 50-50 ರೂಲ್ಸ್ ಮುಂದುವರಿಕೆ ಹಿನ್ನೆಲೆ ಸರ್ಕಾರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಅಸಮಾಧಾನ ಹೊರ ಹಾಕಿದೆ. ಅಲ್ಲದೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ವಿಧಿಸಲಾಗಿದ್ದ ನೈಟ್ ಕರ್ಫ್ಯೂ ಹಿಂಪಡೆಯಲಾಗಿದೆ. ಅಲ್ಲದೆ ಹೋಟೆಲ್, ಪಬ್ಗಳಿಗೆ ವಿಧಿಸಿದ್ದ ಶೇ.50ರ ಆಸನ ವ್ಯವಸ್ಥೆಯನ್ನ ವಾಪಸ್ ಪಡೆಯಲಾಗಿದೆ. ಆದರೆ ಚಿತ್ರಮಂದಿರಗಳಿಗೆ ವಿಧಿಸಿದ್ದ ರೂಲ್ಸ್ ಮಾತ್ರ ಮುಂದೂಡಲಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ವಾಣಿಜ್ಯ ಮಂಡಳಿ ಗರಂ ಆಗಿದೆ.
ಈ ಸಂಬಂಧ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಂ ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ ಸದಸ್ಯರ ನಿಯೋಗ ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಸೋಮವಾರ ಮತ್ತೊಮ್ಮೆ ಸಿಎಂರನ್ನ ಭೇಟಿ ಮಾಡಲು ವಾಣಿಜ್ಯ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.
ಚಿತ್ರೋದ್ಯಮದ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬೇರೆ ಎಲ್ಲಾ ಉದ್ಯಮಗಳಿಗೂ ಸರ್ಕಾರ ಅವಕಾಶ ನೀಡಿದೆ. ಆದರೆ ಚಿತ್ರೋದ್ಯಮಕ್ಕೆ ಯಾಕೆ ಸಂಪೂರ್ಣ ಅವಕಾಶ ನೀಡುತ್ತಿಲ್ಲ? ಈಗಾಗಲೇ ನಿರ್ಮಾಪಕರು, ಕಲಾವಿದರು ಬೀದಿಗೆ ಬಂದಿದ್ದಾರೆ. ಥಿಯೇಟರ್ಗಳಿಗೆ ಶೇ.100ರಷ್ಟು ಆಸನ ವ್ಯವಸ್ಥೆಗೆ ಅವಕಾಶ ನೀಡಲಿ ಎಂದು ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್.ಎಂ.ಸುರೇಶ್ ಹೇಳಿದ್ದಾರೆ.



