Breaking NewsLatestಜಿಲ್ಲಾ ಸುದ್ದಿಮೆಟ್ರೋಹುಬ್ಬಳ್ಳಿ - ಧಾರವಾಡ

Breaking News: ಹಿರಿಯ ಸಾಹಿತಿ ಡಾ. ಚಂದ್ರಶೇಖರ್​ ಪಾಟೀಲ್​​​​​ ನಿಧನ

ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಚಂದ್ರಶೇಖರ ಪಾಟೀಲ್(ಚಂಪಾ) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೋಟಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಥೀವ ಶರೀರವನ್ನು ಯಲಚೇನಹಳ್ಳಿ ಸಮೀಪದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಧಾರವಾಡದವರಾದ ಚಂಪಾ ಅವರು ಕೆಲವಾರು ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿದ್ದರು. ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವಿಮರ್ಶಾ ಕ್ಷೇತ್ರ, ನಾಟಕ ರಚನೆಯಲ್ಲಿ ಪ್ರಸಿದ್ಧರು. ಅವರು ರಚಿಸಿದ ನಾಟಕಗಳು ನಾಡಿನಲ್ಲಿ – ಹೊರನಾಡು – ವಿದೇಶಗಳಲ್ಲಿಯೂ ಪ್ರದರ್ಶಿತವಾಗಿವೆ. ಅವರ ವಿಮರ್ಶೆಯೆಂದರೆ ಬಹು ಹರಿತ ಎಂದೇ ಖ್ಯಾತವಾಗಿತ್ತು. ಸುದೀರ್ಘ ಅವಧಿ ಅವರು “ಸಂಕ್ರಮಣ” ಹೆಸರಿನ ಸಾಹಿತ್ಯ ಪತ್ರಿಕೆಯ ಸಂಪಾದಕರು- ಪ್ರಕಾಶಕರೂ ಆಗಿದ್ದರು. ಕನ್ನಡದ ಹಲವು ಸಾಹಿತಿಗಳನ್ನು ಗುರುತಿಸಿದ ಹೆಗ್ಗಳಿಕೆಯನ್ನು ಈ ಪತ್ರಿಕೆ ಹೊಂದಿದೆ.

ಗೋಕಾಕ್ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಅವರು ಕನ್ನಡಕ್ಕೆ ಎಲ್ಲಿಯೇ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು. ನಾಡು –ನುಡಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಇವರ ಭೌತಿಕ ಅಗಲಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಹಿರಿಯ ಸಾಹಿತಿ, ವಿಮರ್ಶಕ, ನಾಟಕಕಾರ, ಕನ್ನಡಪರ ಹೋರಾಟಗಾರ ಪ್ರೊ. ಚಂದ್ರಶೇಖರ್ ಪಾಟೀಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಂಪಾ ಎಂದೇ ಪ್ರಸಿದ್ಧರಾದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡು-ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಟ್ವೀಟ್​​ ಮಾಡಿದ್ದಾರೆ.

ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ, ಅಭಿಮಾನಿಗಳು ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ ಎಂದು ಮುಖ್ಯಮಂತ್ರಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button