ಈ ಕ್ರೀಡಾಪಟುಗಳಿಗೆ ಆ ನಾಯಿಯೇ ದಾರಿದೀಪ

ಟೋಕಿಯೋ: ಮಂಗಳವಾರ ಆರಂಭಗೊಂಡ ಟೋಕಿಯೋ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ನಾಯಿಯೊಂದು ಕ್ರೀಡಾಪಟುವನ್ನು ಮುನ್ನಡೆಸುತ್ತಿರುವ ದೃಶ್ಯ ಜಗತ್ತಿನ ಗಮನ ಸೆಳೆಯಿತು.
ಭಾರತದ ಸೇನೆಯಲ್ಲಿ ಹಲವಾರು ವಿಧದ ತಳಿಯ ನಾಯಿಗಳಿಗೆ ತರಬೇತಿ ನೀಡಿ ಅವುಗಳನ್ನು ಸೇನಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ನಮಗೆಲ್ಲ ತಿಳಿದ ಸಂಗತಿ.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲೂ ಈ ದೃಶ್ಯ ಕಂಡು ಬಂದಿತ್ತು.

ದೃಷ್ಟಿ ಚೇತನರಾದ ಇಸ್ರೇಲ್ ನ ಕ್ರೀಡಾಪಟುಗಳನ್ನು ಲಾಬ್ರೆಡಾರ್ ತಳಿಯ ನಾಯಿ ಮುನ್ನಡೆಸಿದ್ದು ಉದ್ಘಾಟನಾ ಸಮಾರಂಭದ ಆಕರ್ಷಣೆಯಾಗಿತ್ತು.

ನಾಯಿಯ ಬಾಲವನ್ನು ಮುಟ್ಟಿ ಅದರ ಸೂಚನೆ ಮೇರೆಗೆ ಕ್ರೀಡಾಪಟುಗಳು ಮುಂದೆ ಸಾಗುತ್ತಾರೆ.
ಲಾಬ್ರೆಡಾರ್, ಜರ್ಮನ್ ಷಫರ್ಡ್ ಅಥವಾ ಗೋಲ್ಡನ್ ರಟ್ರಿವರ್ ತಳಿಗಳನ್ನು ಈ ರೀತಿಯ ಕೆಲಸಗಳಿಗೆ ತರಬೇತಿ ನೀಡಿ ಬಳಸಲಾಗುತ್ತದೆ.
ಮೊದಲನೇ ಮಹಾಯುದ್ಧದ ವೇಳೆ ಸಹಸ್ರಾರು ಯೋಧರು ದೃಷ್ಟಿ ಕಳೆದುಕೊಂಡರು. ಜರ್ಮನಿಯ ಡಾಕ್ಟರ್ ಗೆರ್ಹಾರ್ಡ್ ಸ್ಟಾಲಿಂಗ್ ನಾಯಿಗಳಿಗೆ ತರಬೇತಿ ನೀಡಿ ಅವುಗಳನ್ನು ದೃಷ್ಟಿ ಚೇತನರ ನೆರವಿಗೆ ಬಳಸುವುದನ್ನು ಆರಂಭಿಸಿದರು. ಈಗ ನಾಯಿಗಳಿಗೆ ತರಬೇತಿ ನೀಡುವ ಅನೇಕ ತರಬೇತಿ ಕೇಂದ್ರಗಳೇ ಹುಟ್ಟಿಕೊಂಡಿವೆ.
ಅಮೇರಿಕದ ಈಜುಗಾರ್ತಿ ಅನಸ್ತಾಸಿಯಾ ಪಗೋನಿಸ್ ಅವರಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನೆರವಾಗುತ್ತಿರುವುದು ಅವರ ನೆಚ್ಚಿನ ನಾಯಿ ‘ರಾಡರ್’.
ದೃಷ್ಟಿ ಕಳೆದುಕೊಂಡು ಕತ್ತಲ ಜಗತ್ತಿನಲ್ಲಿದ್ದ ಪಗೋನಿಸ್ ಅವರ ಬದುಕನ್ನು ಬೆಳಗಿದ್ದು ರಾಡರ್. ನಾಯಿಯನ್ನೇ ತನ್ನ ಸಹಾಯಕನನ್ನಾಗಿ ಮಾಡಿಕೊಂಡು ಈಜಿನಲ್ಲಿ ಹಲವಾಉ ದಾಖಲೆಗಳನ್ನು ಬರೆದ ಪಗೊನಿಸ್ ಇಂದು ಟೋಕಿಯೋ ದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಾರೆ.



