
ಬೆಂಗಳೂರು: ರಾಜ್ಯದ ಹಣಕಾಸಿನ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆ ಬಗ್ಗೆ ತೀರ್ಮಾನ ಮಾಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಈಗಿರುವ ಕಲ್ಲಿದ್ದಲು ಸರಬರಾಜಿನ ಪ್ರಮಾಣದಲ್ಲಿ 4 ರೇಕು ಹೆಚ್ಚಿಸುವಂತೆ ಮನವಿ ಮಾಡಲಾಗಿದ್ದು, ಮಹಾರಾಷ್ಟ್ರ ಬಳಿ ಇರುವ ಚಂದ್ರಾಪುರ ಕಲ್ಲಿದ್ದಲು ಬ್ಲಾಕ್ ರಾಜ್ಯಕ್ಕೆ ಹಂಚಿಕೆಯಾಗಿದೆ ಎಂದರು.
ಈ ಭಾಗದ ಕಲ್ಲಿದ್ದಲು ಸರಬರಾಜಿಗೆ ಸಂಬಂಧಿಸಿಂತೆ ಮಹಾರಾಷ್ಟ್ರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರಿಂದ ವರದಿ ಪಡೆದು ಒಂದು ವಾರದೊಳಗೆ ಅನುಮತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಒಡಿಶಾದ ಮಹಾನಂದಿ ಕಲ್ಲಿದ್ದಲು ಬ್ಲಾಕ್ ಗೆ ಸಂಬಂಧಿಸಿದಂತೆಯೂ ಅನುಮತಿ ಪ್ರಕ್ರಿಯೆಯ ಕುರಿತಂತೆಯೂ ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದೆ ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
1 ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಈಗಾಗಲೇ ತಜ್ಞರುಗಳು ಸಭೆ ನಡೆಸುತ್ತಿದ್ದು, ತಜ್ಞರುಗಳ ಶಿಫಾರಸ್ಸು ವರದಿ ಪಡೆದು, ದಸರಾ ಆಚರಣೆಯ ಮತ್ತು ಉಪ ಚುನಾವಣೆ ನಂತರ ಸಭೆ ನಡೆಸಿ ತೀರ್ಮಾನಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಉಸ್ತುವಾರಿ ಸಚಿವರ ನೇಮಕ ಹಾಗೂ ಬೆಂಗಳೂರು ಅಭಿವೃದ್ಧಿ ವಿಷಯವಾಗಿ ಬೆಂಗಳೂರು ಭಾಗದ ಸಚಿವರು ಹಾಗೂ ಎಲ್ಲಾ ಶಾಸಕರುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಬಗ್ಗೆ ಮಾತುಕತೆ ನಡೆಸಿ ಕೂಡಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.



