ಕೋವಿಡ್ ಹೆಚ್ಚಳ: ಕಾರವಾರ, ಹೊನ್ನಾವರ ಶಾಲೆಗಳಿಗೆ ರಜೆ ಘೋಷಣೆ

ಕಾರವಾರ : ಶನಿವಾರದಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 396 ಜನರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು,ಸಕ್ರಿಯ ಪ್ರಕರಣ 1425 ಕ್ಕೆ ಏರಿಕೆ ಕಂಡಿದೆ. ವಿದ್ಯಾರ್ಥಿಗಳಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಕಾರವಾರ ಮತ್ತು ಹೊನ್ನಾವರ ನಗರದ 1 ರಿಂದ 8 ನೇ ತರಗತಿ ಶಾಲೆಗಳಿಗೆ ಸೋಮವಾರದಿಂದ ಐದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯು ಕಾಲೇಜಿನ ವ್ಯಾಸಂಗಕ್ಕೆ ಆದ್ಯತೆ ನೀಡಿ ಪ್ರಥಮ ಪಿಯು ತರಗತಿಗಳನ್ನು ಶೇ.50ರಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ – 19 ರ ಶಿಷ್ಟಾಚಾರದ ಅನ್ವಯ ಪರ್ಯಾಯ ತರಗತಿಗಳನ್ನು ನಡೆಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ ಸರಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಮೀರದಂತೆ ತರಗತಿಗಳನ್ನು ನಡೆಸುವಂತೆ ಹಾಗೂ ಶಾಲಾ – ಕಾಲೇಜುಗಳಲ್ಲಿ ಕೋವಿಡ್ – 19 ರ ನೋಡಲ್ ಅಧಿಕಾರಿ ನೇಮಿಸಿ ಕೋವಿಡ್ – 19 ರ ಶಿಷ್ಟಾಚಾರವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಶಾಲಾ – ಕಾಲೇಜು ವಿದ್ಯಾರ್ಥಿಗಳು ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ಓಡಾಡುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಆಯಾ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿಸಿ ಕೋವಿಡ್ 19 ರ ಶಿಷ್ಟಾಚಾರವನ್ನು ಪಾಲನೆ ಮಾಡದೇ ಇರುವ ಬಗ್ಗೆ ದಂಡ ವಿಧಿಸಬೇಕೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.



