ಹಿಜಾಬ್ ಸಂಘರ್ಷಕ್ಕೆ ಕಾಂಗ್ರೆಸ್ ನೇರ ಹೊಣೆ: ವೀರೇಶ್ ಹನಗವಾಡಿ ಆರೋಪ

ದಾವಣಗೆರೆ: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ನಡುವಿನ ಸಂಘರ್ಷಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಆರೋಪಿಸಿದರು.
ಯಾವುದೇ ಕಾರಣ ಸಿಗದೇ ಕಾಂಗ್ರೆಸ್ ಪಕ್ಷವು ದೇಶಪ್ರೇಮಿ ಈಶ್ವರಪ್ಪನವರ ವಿರುದ್ಧ ಅಹೋರಾತ್ರಿ ಪ್ರತಿಭಟಿಸುವ ಮೂಲಕ ಜನತೆ ಮುಂದೆ ಹಾಸ್ಯಾಸ್ಪದವೆನಿಸಿಕೊಂಡಿದೆ ಎಂದು ಲೇವಡಿ ಮಾಡಿದರು.
ಇತ್ತೀಚೆಗೆ ನಡೆದಿರುವ ಹಿಜಾಬ್ ಕುರಿತಂತೆ ವಿರೋಧಾಭಾಸ ಹೇಳಿಕೆಗಳನ್ನು ನೀಡುವ ಮೂಲಕ ಶಾಲಾ-ಕಾಲೇಜುಗಳ ಎಲ್ಲ ಗಲಾಟೆಗಳಿಗೂ, ಗೊಂದಲಗಳಿಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ಸೇ ಕಾರಣವಾಗಿದೆ ಎಂದು ವೀರೇಶ್ ಆರೋಪಿಸಿದರು.
ರಾಷ್ಟಧ್ವಜದ ಬಗ್ಗೆ ಅತಿ ಪ್ರೀತಿ ತೋರಿಸುವಂತೆ ನಾಟಕವಾಡಿದ ಕಾಂಗ್ರೆಸ್, ಅಭಿವೃದ್ಧಿ ಚಿಂತನೆಯ ವೇದಿಕೆಯಲ್ಲಿ ಸರ್ಕಾರಕ್ಕೆ ಸಹಕಾರ ನೀಡದೆ ಕುಂಟುನೆಪ ತೆಗೆದಿದೆ ಎಂದು ವ್ಯಂಗ್ಯವಾಡಿದರು.
ರಾಷ್ಟ್ರಭಕ್ತಿ ಹಾಗೂ ಹಿಂದುತ್ವವವನ್ನು ಮೈಗೂಡಿಸಿಕೊಂಡಿರುವ ದೇಶಪ್ರೇಮಿ ಈಶ್ವರಪ್ಪನವರು ಲಾಲ್ ಚೌಕ್ ಹಾಗೂ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದವವರು. ಇಂತಹವರ ಬಗ್ಗೆ ದನಿ ಎತ್ತಿ ಕಾಂಗ್ರೆಸ್ ಜನರ ಮುಂದೆ ಹಾಸ್ಯಾಸ್ಪದ ಎನಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣ ಅವರಲ್ಲೇ ಇರುವ ನಾಯಕತ್ವದ ಗೊಂದಲ ಹಾಗೂ ನೈತಿಕ ಹಾಗೂ ಬೌದ್ಧಿಕ ದಿವಾಳಿತನ ಕಾರಣ. ಇದೆಲ್ಲವನ್ನು ಮರೆಮಾಚಲು ಈ ನಾಟಕ ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆ ಮಾಡಿ, ಕೊರೊನಾ ಹರಡಿದರು. ಪಾದಯಾತ್ರೆಯಲ್ಲೂ ವಿಫಲವಾದರು. ಅನೇಕ ವೈಫಲ್ಯ ಕಂಡ ಕಾಂಗ್ರೆಸ್, ಹೀನಾಯ ಸೋಲುಗಳಿಂದ ನಿರಾಸೆ ಹೊಂದಿ ಹೀಗಾಡುತ್ತಿದೆ. ರೈತರು, ಕಾರ್ಮಿಕರು, ಕುಡಿಯುವ ನೀರು, ವಿದ್ಯಾರ್ಥಿಗಳ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸಿ ಚರ್ಚಿಸುವ ಬದಲು ಕುಗ್ಗುತ್ತಿರುವ ಜನಪ್ರಿಯತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹೀಗಾಡುತ್ತಿರುವ ಕಾಂಗ್ರೆಸ್ ಜನಸಾಮಾನ್ಯರ ತೆರಿಗೆ ಹಣವನ್ನು ಫೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.



