ತನ್ನ ಮಗನನ್ನೇ ಕೊಚ್ಚಿಕೊಂದ ಮಾನಸಿಕ ಅಸ್ವಸ್ಥೆ ತಾಯಿ

ಮೈಸೂರು: ಹೆತ್ತ ತಾಯಿಯೇ ತನ್ನ 4 ವರ್ಷದ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಬೂದುನೂರು ಗ್ರಾಮದಲ್ಲಿ ನಡೆದಿದ್ದು, ಶ್ರೀನಿವಾಸ ಎಂಬ ನಾಲ್ಕು ವರ್ಷದ ತನ್ನ ತಾಯಿಯಿಂದ ಭೀಕರವಾಗಿ ಕೊಲೆಗೀಡಾದ್ದಾನೆ. ಈ ಘಟನೆಯು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಬೂದುನೂರು ಗ್ರಾಮದ ಶಂಕರ್ ಯಡೆತೊರೆ ಗ್ರಾಮದ ಭವಾನಿಯನ್ನು ಮದುವೆಯಾಗಿದ್ದು ದಂಪತಿಗೆ 4 ವರ್ಷದ ಮಗ ಇದ್ದನು.
ಈಕೆ ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಹೇಳುತ್ತಿದ್ದು, ಮಾನಸಿಕ ಅಸ್ವಸ್ಥವಾಗಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಗಂಡನನ್ನ ಬಿಟ್ಟು ಮಗನೊಂದಿಗೆ ತವರು ಮನೆ ಸೇರಿದ್ದಳು.
ಕಳೆದ 15 ದಿನಗಳ ಹಿಂದೆ ಪತಿಯೇ ಹೋಗಿ ಪತ್ನಿ ಮತ್ತು ಮಗನನ್ನ ಬೂದುನೂರಿಗೆ ಕರೆದುಕೊಂಡು ಬಂದಿದ್ದ. ಆದರೆ, ನಿನ್ನೆ ರಾತ್ರಿ ಕೆಲಸ ನಿಮಿತ್ತ ಹೊರಗಡೆ ಹೋದಾಗ ಅಸ್ವಸ್ಥ ತಾಯಿ ತನ್ನ 4 ವರ್ಷದ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ.
ಬಾಲಕನ ತಲೆ ಭಾಗ ಸಂಪೂರ್ಣವಾಗಿ ರಕ್ತಸಿಕ್ತವಾಗಿತ್ತು. ಮನೆಗೆ ಬಂದು ನೋಡಿದ ಶಂಕರ್ ಗಾಬರಿಯಾಗಿ ಗ್ರಾಮಸ್ಥರ ಸಹಾಯದಿಂದ ಹೆಚ್ ಡಿ ಕೋಟೆ ಆಸ್ಪತ್ರೆಗೆ ಕರೆ ತಂದಿದ್ದನು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನ ಮೈಸೂರಿಗೆ ಕರೆದುಕೊಂಡಿದ್ದು ಬಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



