ಕೋವಿಡ್ ಲಸಿಕೆ ಹಾಕಿಸದೇ ಸೋಂಕಿತರಾದವರಿಗೆ ಉಚಿತ ಚಿಕಿತ್ಸೆ ಇಲ್ಲ: ಕೇರಳ ಸರ್ಕಾರ ಖಡಕ್ ಎಚ್ಚರಿಕೆ

ತಿರುವನಂತಪುರ: ಕೋವಿಡ್ ಲಸಿಕೆ ಪಡೆಯದೆ ಸೋಂಕಿತರಾಗಿ ಆಸ್ಪತ್ರೆ ದಾಖಲಾಗುವವರಿಗೆ ಇನ್ನುಮುಂದೆ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ಕೋವಿಡ್ 19 ವಿರುದ್ಧ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ತಮ್ಮ ಆರೋಗ್ಯದ ಕಾಳಜಿ ನಿರ್ಲಕ್ಷ್ಯಿಸಿ ಲಸಿಕೆ ಪಡೆಯದೆ ಸೋಂಕಿತರಾಗಿ ಆಸ್ಪತ್ರೆಗೆ ಸೇರಿದರೆ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.
ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಆರೋಗ್ಯ ಸಮಸ್ಯೆಗಳಿಂದಾಗಿ ಲಸಿಕೆ ಪಡೆಯಲಾಗದೇ ಉಳಿದವರು ಮಾತ್ರ ಉಚಿತ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ. ಅಂತಹ ರೋಗಿಗಳು ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.
ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಸಿಬ್ಬಂದಿ ಮತ್ತು ಶಿಕ್ಷಕರು ಅಸ್ವಸ್ಥತೆ ಅಥವಾ ಅಲರ್ಜಿ ಕಾರಣದಿಂದ ಲಸಿಕೆ ಪಡೆಯಲು ಅಸಾಧ್ಯವಾಗಿದ್ದರೆ ಕರ್ತವ್ಯಕ್ಕೆ ಮರಳಲು ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕಾಗುತ್ತದೆ. ಜತೆಗೆ ಸಂಸ್ಥೆಗೆ ಹಾಜರಾಗಬೇಕಿದ್ದರೆ ಪ್ರತೀ ವಾರವೂ ಆರ್ ಟಿಪಿಸಿಆರ್ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಇದು ಸರ್ಕಾರಿ ನೌಕರರಿಗೂ ಅನ್ವಯವಾಗುತ್ತದೆ ಎಂದು ಕೇರಳ ಸರ್ಕಾರ ತಿಳಿಸಿದೆ
