Latestಉತ್ತರ ಕನ್ನಡಜಿಲ್ಲಾ ಸುದ್ದಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರವಾರದಿಂದ ಕೋವಿಡ್ ಹೊಸ ನಿಯಮ ಜಾರಿ

ಕಾರವಾರ : ಗೋವಾ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳವಾದ್ದರಿಂದ ಮಹಾರಾಷ್ಟ್ರ, ಕೇರಳ ರಾಜ್ಯಕ್ಕೆ ವಿಧಿಸಿದ ಮಾರ್ಗಸೂಚಿಯಂತೆ ಗೋವಾ ರಾಜ್ಯದ ಜನರು ಕಾರವಾರಕ್ಕೆ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ. ಗೋವಾ ರಾಜ್ಯದಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸಲು 72 ಗಂಟೆಯ ಆರ್.ಟಿ.ಪಿ.ಸಿ.ಆರ್ ಹಾಗೂ ಎರಡು ಡೋಸ್ ಕೋವಿಡ್ ಲಸಿಕೆಯನ್ನ ಕಡ್ಡಾಯ ಮಾಡಲಾಗಿದೆ.

ಗುರುವಾರದಿಂದ ಈ ಆದೇಶ ಜಾರಿಗೆ ಬರಲಿದೆ. ಈಗಾಗಲೇ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ, ಜೋಯಿಡಾ ತಾಲೂಕಿನ ಅನ್ ಮೋಲ್,ಬರ್ಚಿ, ಭಟ್ಕಳದ ಶಿರೂರು ಭಾಗದಲ್ಲಿಯೂ ಚೆಕ್ ಪೋಸ್ಟ್ ತೆರೆಯಲಾಗಿದೆ. ಇದರ ಜೊತೆ ಅಂತರ್ ಜಿಲ್ಲೆಯ ಯಲ್ಲಾಪುರ, ಮುಂಡಗೋಡಿನ ಬಾಚಣಕಿ, ಹಳಿಯಾಳದ ಮಾವಿನಕೊಪ್ಪ, ಶಿರಸಿ ಮತ್ತು ಸಿದ್ದಾಪುರದ ಚೂರಿಕಟ್ಟೆಯಲ್ಲಿ ಚೆಕ್ ಪೋಸ್ಟ್ ತೆರೆಯಲು ಸೂಚಿಸಲಾಗಿದೆ.

ಇನ್ನು ಹೊಸವರ್ಷದ ಸಂಭ್ರಮಕ್ಕೆ ಜಿಲ್ಲೆಯ ಜನರು ಗೋವಾಕ್ಕೆ ಹೋಗಿ ಬಂದಿರುವುದರಿಂದ ಸೋಂಕು ಹೆಚ್ಚಾಗದಂತೆ ತಡೆಯಲು ವಿಲೇಜ್ ಲೆವೆಲ್ ಹಾಗೂ ವಾರ್ಡ್ ಲೆವೆಲ್ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ. ಇದರ ಜೊತೆಗೆ ಗುರುವಾರದಿಂದಲೇ ಜಾರಿಗೆ ಬರುವಂತೆ ತಾಲೂಕು ಲೆವೆಲ್ ಕಂಟ್ರೋಲ್ ರೂಮ್ ವ್ಯವಸ್ಥೆಯನ್ನು ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಉಳಿದಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಇರಲಿದೆ.

ಗೋವಾಕ್ಕೆ ಪ್ರತಿ ದಿನ ಹೋಗಿ ಬರುವ ಕಾರ್ಮಿಕರಿಗೆ ಒಂದು ವಾರದ ಪಾಸ್ ನೀಡಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ನೀಡಿದ್ದಾರೆ. ಇದರ ಜೊತೆಗೆ ಪ್ರತಿ ವಾರ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ನಂತರವಷ್ಟೇ ಪಾಸ್ ನೀಡಲು ಸೂಚಿಸಲಾಗಿದೆ.

ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಮುರ್ಡೇಶ್ವರ ದೇವಸ್ಥಾನ, ಇಡಗುಂಜಿಯ ಮಹಾಗಣಪತಿ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ 50 ಜನರ ಸರತಿಯಂತೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್.ಅಥವಾ ಎರಡು ಡೋಸ್ ಲಸಿಕೆ ಪಡೆದ ಸರ್ಟಿಫಿಕೇಟ್ ಇಟ್ಟುಕೊಂಡಿರಬೇಕು. ಆದರೆ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯದವರಿಗೆ 72 ತಾಸಿನ ಆರ್.ಟಿ.ಪಿ.ಸಿ.ಆರ್ ಕಡ್ಡಾಯವಾಗಿರುತ್ತದೆ. ಉಳಿದಂತೆ ರಾಜ್ಯದ ನಿಯಮಗಳು ಅನ್ವಯಿಸುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮಾಸ್ಕ್ ಧರಿಸದವರಿಗೆ ದಂಡ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಬೇಕು. ಹೊಸ ನಿಯಮದಂತೆ ಗುರುವಾರದಿಂದ ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರು ತಿಳಿಸಿದ್ದಾರೆ. ಇದಲ್ಲದೆ ಜಿಲ್ಲಾ ಗಡಿ ಹಾಗೂ ಅಂತರ್ ಜಿಲ್ಲಾ ಗಡಿಯಲ್ಲಿ ತಪಾಸಣೆಗಾಗಿ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಮಾಡಿರುವುದಾಗಿ ಅವರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button