
ಬೆಂಗಳೂರು: ತುಮಕೂರು ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಎದುರೇ ಪ್ರಚೋದನಾತ್ಮಕ ಹೇಳಿಕೆ ಹಾಗೂ ಬೆದರಿಕೆ ಹಾಕಿರುವ ಹಿಂದೂಪರ ಸಂಘಟನೆಯ ಮುಖಂಡನ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಪ್ರದೇಶ ಕಾಂಗ್ರೆಸ್ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದೆ.
ಈ ಸಂಬಂಧ ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದ ನಿಯೋಗ ಡಿಜಿಪಿ ಪ್ರವೀಣ್ ಸೂದ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ತುಮಕೂರಿನಲ್ಲಿ ಭಜರಂಗದಳ ಜಿಲ್ಲಾ ಮುಖಂಡನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಬಂದ್ ವೇಳೆ, ನಿರ್ದಿಷ್ಠ ಸಮುದಾಯದವರ ವಿರುದ್ಧ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿರುವ ಹಾಗೂ ಸ್ವಾತಂತ್ರ್ಯ ಸೇನಾನಿ ಟಿಪ್ಪುಸುಲ್ತಾನ್ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವವರ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಕಾಂಗ್ರೆಸ್ ನಿಯೋಗದ ಮನವಿ ಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಪ್ರತಿಯೊಬ್ಬರಿಗೂ ಅಧಿಕಾರ ಇದೆ. ಮೊನ್ನೆ ತುಮಕೂರಿನಲ್ಲಿ ಮಂಜು ಭಾರ್ಗವ ಎಂಬ ಯುವಕನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿ ಕೆಲ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದು ತಪ್ಪಲ್ಲ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಬೇಕು ಎಂದಿದ್ದಾರೆ. ಮುಚ್ಚಲಿ ಅದಕ್ಕೆ ಯಾವುದೇ ವಿರೋಧ ಇಲ್ಲ ಎಂದರು.
ಆದರೆ, ಯಾರೋ ಒಬ್ಬರು ಮಾಡಿದ ತಪ್ಪಿಗೆ ಒಂದು ಸಮುದಾಯದ ವಿರುದ್ಧ ದೂರುವುದು ಸರಿಯಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ಪ್ರಚೋದನೆ ನೀಡಲು ಅವಕಾಶ ನೀಡಬೇಡಿ ಎಂದು ಡಿಜಿ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಎಸ್ಪಿ, ಡಿಸಿ ಅವರ ಮುಂದೆ ಅವಾಚ್ಯವಾಗಿ ಬೈಯ್ಯುವುದು ಸರಿಯಲ್ಲ. ಇದನ್ನು ಹೀಗೆ ಬಿಟ್ಟರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಬೇರೆ ಜಿಲ್ಲೆ, ತಾಲೂಕುಗಳಲ್ಲಿ ಇದೇ ಪಸರಿಸುತ್ತದೆ. ಇದಕ್ಕೆ ಅವಕಾಶ ಕೊಡಬೇಡಿ ಕಾನೂನು ಸುವ್ಯವಸ್ಥೆ ಕಾಪಾಡಿ ಎಂದೂ ಕೋರಿದ್ದೇವೆ ಎಂದು ಎಂದರು.



