Latestಮೆಟ್ರೋ

ಮಳೆಹಾನಿ: ಜಿಲ್ಲಾ ಪ್ರವಾಸ ನಡೆಸಲು‌ ಸಚಿವರಿಗೆ ನೀತಿ ಸಂಹಿತೆ ಅಡ್ಡಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ‌ಮಳೆಹಾನಿ‌ ಹಿನ್ನೆಲೆಯಲ್ಲಿ‌ ಸಚಿವರು ಜಿಲ್ಲಾ ಪ್ರವಾಸ ನಡೆಸಲು‌ ಚುನಾವಣಾ ‌ನೀತಿಸಂಹಿತೆ ಅಡ್ಡಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ಸಚಿವರು ಆಯಾ ಜಿಲ್ಲೆಗಳಲ್ಲಿ ಇದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿದೆ ಎಂದರು.

ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಮೇಲ್ಮನೆ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಚಿವರು ಮಳೆ ಸಂತ್ರಸ್ತರ ನೆರವಿಗೆ ಧಾವಿಸುತ್ತಿಲ್ಲ ಎಂಬ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿರುವುದನ್ನು ಸ್ಮರಿಸಬಹುದು.

ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ:

ಬಿಡಿಎ ಭ್ರಷ್ಟಾಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಎಸಿಬಿ ವರದಿ ಸಲ್ಲಿಸಿದ ನಂತರ ಶಿಫಾರಸ್ಸುಗಳನ್ನು ಚಾಚೂತಪ್ಪದೆ ಪಾಲಿಸಲಾಗುವುದು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

‘ಸಾರ್ವಜನಿಕರಿಂದಲೂ ಬಿಡಿಎ ಅಕ್ರಮಗಳ ಬಗ್ಗೆ ದೂರುಗಳು ಬಂದಿದ್ದವು. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಹ ಈ ಬಗ್ಗೆ ನನ್ನ ಗಮನ ಸೆಳೆದಿದ್ದರು. ಸಂಬಂಧಪಟ್ಟ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿತ್ತು. ತಪ್ಪಿತಸ್ಥರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಿರಲಿ, ಅಧಿಕಾರಿಗಳಿರಲಿ , ಅವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದರು.
ಬಿಡಿಎ ಸ್ವಚ್ಛಗೊಳಿಸಬೇಕು. ಸಾಮಾನ್ಯ ಜನರಿಗೆ ಅಗತ್ಯವಿರುವ ಸೇವೆಗಳನ್ನು ದೊರಕಿಸುವ ದೃಷ್ಟಿಯಿಂದ ಬಿಡಿಎ ಸ್ವಚ್ಛಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೆಳೆಹಾನಿಗೆ ಪರಿಹಾರ:

ಅನಿರೀಕ್ಷಿತ, ಅಕಾಲಿಕವಾಗಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡಿನಲ್ಲಿ, ಉತ್ತರ ಹಾಗೂ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕಳೆದ 3 ದಿನಗಳಲ್ಲಿ ಒಳನಾಡಿನಲ್ಲಿ ಹೆಚ್ವಿನ ಮಳೆಯಾಗಿ ಬೆಳೆ ಹಾನಿಯಾಗಿದೆ. ಹಲವಾರು ಸಂಪರ್ಕ ರಸ್ತೆ , ಕೆಲವೆಡೆ ಸಾವುಗಳಾಗಿರುವುದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಸಿಎಂ ವಿವರಿಸಿದರು.

ಜುಲೈ, ಆಗಸ್ಟ್, ಸೆಪ್ಟೆಂಬರ್ ಮಾಹೆಗಳಲ್ಲಿ ಸುಮಾರು 3 ಲಕ್ಷ ರೈತರ ಬೆಳೆಹಾನಿಯಾಗಿದ್ದರಿಂದ ಪರಿಹಾರ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಬಾಕಿಯಿದ್ದ 130 ಕೋಟಿ ರೂ.ಗಳನ್ನು ಡಿ.ಬಿ.ಟಿ ಮೂಲಕ ವಿತರಿಸಲು ಸೂಚಿಸಲಾಗಿದೆ ಎಂದರು.

ಮೊನ್ನೆ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವೀಡಿಯೊ ಸಂವಾದದಲ್ಲಿ ಸಮೀಕ್ಷೆಯ ವರದಿಯನ್ನು ಕೂಡಲೇ ಸಲ್ಲಿಸಲು ಸೂಚಿಸಲಾಗಿದೆ. ನಿರಂತರ ಮಳೆಯಿಂದಾಗಿ ಸಮೀಕ್ಷೆ ನಡೆಸುವುದೂ ಕಷ್ಟವಾಗಿದೆ. ಮಳೆ ತಗ್ಗಿರುವ ಪ್ರದೇಶಗಳಲ್ಲಿ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲು ಸೂಚಿಸಿದ್ದು, ಈಗಾಗಲೇ ಕೆಲವೆಡೆ ಸಮೀಕ್ಷೆಗಳು ಪ್ರಾರಂಭವಾಗಿದೆ. ಪರಿಹಾರ ಪೋರ್ಟಲ್ ನಲ್ಲಿ ಮಾಹಿತಿ ಅಪ್ ಲೋಡ್ ಆಗುತ್ತಿದೆ. ಇಂದು ಸಂಜೆ ವರದಿಗಳನ್ನು ಪುನರ್ ಪರಿಶೀಲಿಸಿ, ನೆರವು ನೀಡುವ ಬಗ್ಗೆ ಹಿರಿಯ ಅಧಿಕಾಗಳೊಂದಿಗೆ ಚರ್ಚೆ ಮಾಡಿ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.

ಬೆಂಗಳೂರಿನ ಬಗ್ಗೆ ಕಾಳಜಿ ಇದೆ:

ನಗರ ಪ್ರದಕ್ಷಿಣೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಹೆಚ್.ಎಸ್.ಆರ್ ಬಡಾವಣೆ, ರಾಜರಾಜೇಶ್ವರಿ ನಗರ, ಮಡಿವಾಳ ಕೋರಮಂಗಲಗಳಿಗೆ ಈಗಾಗಲೇ ಭೇಟಿ ನೀಡಿದ್ದು, ಬೆಂಗಳೂರಿನ ಬಗ್ಗೆ ಖಂಡಿತವಾಗಿ ಸರ್ಕಾರಕ್ಕೆ ಕಾಳಜಿ ಇದೆ. ಮಳೆ ನಿಂತ ಕೂಡಲೇ ಕಾಮಗಾರಿ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button