
ಮೈಸೂರು ; ನೈಟ್ ಕರ್ಫ್ಯೂ ಆದೇಶದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಅಕ್ಕಪಕ್ಕದ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಓಮಿಕ್ರಾನ್ ಹರಡದಂತೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದರು.
ದೇಶಾದ್ಯಂತ ಓಮಿಕ್ರಾನ್ ಬಗ್ಗೆ ಕಟ್ಟೆಚ್ಚರವಹಿಸಲಾಗಿದ್ದು, ರಾಜ್ಯದಲ್ಲೂ ಮಂಜಾಗ್ರತಾ ಕ್ರಮ ಕೈಗೊಳ‍್ಳಲಾಗಿದೆ ಎಂದು ತಿಳಿಸಿದರು. ಫೆಬ್ರವರಿಯಲ್ಲಿ ಓಮಿಕ್ರಾನ್ ಜಾಸ್ತಿಯಾಗುತ್ತೆ ಎಂಬುದಕ್ಕೆ ಪುರಾವೆ ಇಲ್ಲ, ಅದಕ್ಕೆ ಪೂರಕವಾದ ದಾಖಲೆ ಇಲ್ಲ, ಸಂಶೋಧನೆಯೂ ನಡೆದಿಲ್ಲ. ಆದಾಗ್ಯೂ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ ಹೊರಡಿಸಿರುವ ಮಾರ್ಗೂಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹೊಸ ವರ್ಷದ ಸಂಭ್ರಮ ಓಮಿಕ್ರಾನ್ ಹರಡಲು ದಾರಿ ಮಾಡಿಕೊಡದಿರಲಿ ಎಂದು ಡಿ.28ರಿಂದ ಜ.7 ರ ವರೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.



