Breaking NewsLatestಮೆಟ್ರೋರಾಜ್ಯರಾಷ್ಟ್ರೀಯ

ಮೇಕೆದಾಟು ಬಿಕ್ಕಟ್ಟಿನ ನಡುವೆಯೇ ಕೇಂದ್ರ ಜಲಶಕ್ತಿ ಸಚಿವರೊಡನೆ ಬಿಎಸ್​ವೈ ಸಭೆ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳ್ನಾಡು ಸರ್ಕಾರಗಳ ನಡುವೆ ಸಂಘರ್ಷದ ಸೂಚನೆಗಳು ಕಾಣಿಸುತ್ತಿರುವ ಹೊತ್ತಲ್ಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಬೆಂಗಳೂರಿಗೆ ಭೇಟಿ ನೀಡಿದ್ದು, ಅವರೊಂದಿಗೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.

ಮೇಕೆದಾಟು ವಿಚಾರವಾಗಿ ತಮಿಳುನಾಡಿನಲ್ಲಿ ಸರ್ವಪಕ್ಷಗಳು ಒಗ್ಗಟ್ಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮುಂದೆ ದೊಡ್ಡ ಸವಾಲೇ ಇರುವಂತೆ ಕಾಣಿಸುತ್ತಿದೆ. ಈ ನಡುವೆ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆಗೆ ಇಂದೇ ಗುದ್ದಲಿ ಪೂಜೆ ಆರಂಭಿಸಿ, ನಾವು ನಿಮ್ಮೊಂದಿಗಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಕೇಂದ್ರದ ಜಲಶಕ್ತಿ ಸಚಿವರ ಭೇಟಿ, ಅವರೊಂದಿಗಿನ ಸಭೆಗಳು ಮಹತ್ವ ಪಡೆಯಲಿವೆ.

ಬೆಂಗಳೂರುಗೆ ಕುಡಿಯುವ ನೀರು ಒದಗಿಸುವ ಮತ್ತು ತಮಿಳ್ನಾಡಿಗೆ ಅಬಗತ್ಯ ನೀರು ಹರಯದಂತೆ ತಡೆಯುವ ಉದ್ದೇಶದಿಂದ ಮೇಕೆದಾಟು ಬಳಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಗೆ ತಮಿಳುನಾಡು ತಕರಾರು ಎತ್ತುತ್ತಲೇ ಇದ್ದು, ಈ ಸಂಬಂಧ ಕೆಲವು ದಿನಗಳ ಹಿಂದೆ ಕೆಂದ್ರ ಸಚಿವ ಶೆಕಾವತ್ ಅವರನ್ನು ತಮಿಳ್ನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಭೆಟಿಯಾಗಿ ಮಾತುಕತೆ ನಡೆಸಿದ್ದರು.

ಇದಾದ ಬಳಿಕ ನಿನ್ನೆಯಷ್ಟೇ ತಮಿಳ್ನಾಡಿನ ಎಲ್ಲಾ 13 ಪಕ್ಷಗಳು, ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ತೆಗೆದುಕೊಂಡಿವೆ. ಯೋಜನೆ ತಡೆಗೆ ಸುಪ್ರೀಂ ಕೋರ್ಟ್​​​ ಮೆಟ್ಟಿಲೇರುವುದು ಸೇರಿದಂತೆ ಎಲ್ಲ ಅಗತ್ಯ ಹೆಜ್ಜೆಗಳನ್ನು ತೆಗೆದುಕೊಳ್ಳಲು ಅಲ್ಲಿನ ಸರ್ವಪಕ್ಷಗಳು ನಿರ್ಧರಿಸಿವೆ.

ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಯೋಜನೆಗೆ ತಕರಾರು ಬೇಡವೆಂದು ವಿನಂತಿಸಿ ಈಗಾಗಲೇ ತಮುಳ್ನಾಡು ಸಿಎಂ ಎಂಕೆ ಸ್ಟಾಲಿನ್​ ಅವರಿಗೆ ಪತ್ರ ಬರೆದಿದ್ದರು. ಆ ಬಳಿಕವೇ ಇದೆಲ್ಲ ತೀರ್ಮಾನ ತಮಿಳ್ನಾಡಿನಲ್ಲಿ ಆಗಿದೆ.

ಇದೆಲ್ಲದರ ನಡುವೆಯೇ ಮೇಕೆದಾಟು ವಿಚಾರದಲ್ಲಿ ಕೇಂದ್ರ ತೆಗೆದುಕೊಳ್ಳಬಹುದಾದ ನಿಲುವು ಕುತೂಹಲ ಮೂಡಿಸಿದ್ದು, ರಾಜ್ಯಕ್ಕೆ ಆಗಮಿಸಿರುವ ಜಲಶಕ್ತಿ ಸಚಿವ ಶೆಖಾವತ್ ಈ ವಿಚಾರದಲ್ಲಿ ಕೇಂದ್ರದ ನಿಲುವನ್ನು ಈಗಲೇ ಘೋಷಿಸಬಹುದೇ ಎಂಬ ಕುತೂಹಲವೂ ಇದೆ.

Spread the love

Related Articles

Leave a Reply

Your email address will not be published. Required fields are marked *

Back to top button