ಲಕ್ಷ್ಮೀಸಾಗರ ಸ್ವಾಮಿಗೌಡ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ.ಪ್ರಕರಣದ ತನಿಖೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ರಾಜ್ಯ ಉಚ್ಛನ್ಯಾಯಾಲಯಕ್ಕೆ ಪ್ರಕರಣದ ತನಿಖಾಧಿಕಾರಿ ವಿಚಾರಣಾ ವರದಿಯನ್ನು ಸಲ್ಲಿಸುವ ಮೊದಲೇ ಎಸ್ಐಟಿ ಮುಖ್ಯಸ್ಥ ಹಾಗೂ ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಎರಡು ತಿಂಗಳ ದೀರ್ಘ ರಜೆಯ ಮೇಲೆ ತೆರಳಿರುವುದು ಸರ್ಕಾರ ಮತ್ತು ಎಸ್ಐಟಿ ನಡುವೆ ಸಮನ್ವಯವಿಲ್ಲ ಎಂಬುದನ್ನು ಬಟಾಬಯಲು ಮಾಡಿದೆ.
ಹೌದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ರಮೇಶ್ ಜಾರಕಿಹೊಳಿ ಆತ್ಯಾಚಾರ ಪ್ರಕರಣ, ಆ ಸಂಬಂಧಿತ ಹೊರ ಬಂದ ಸಿ.ಡಿ ನಂತರದ ಬೆಳವಣಿಗೆಗಳಲ್ಲಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರದ ಬೆಳವಣಿಗೆಯಲ್ಲಿ ಸಂತ್ರಸ್ತೆ ಎನ್ನಲಾದ ಹೆಣ್ಣುಮಗಳು ನೇರ ನ್ಯಾಯಾಧೀಶರ ಮುಂದೆ ಹಾಜರಾಗಿ, ಸಚಿವ ರಮೇಶ್ ಜಾರಕಿಹೊಳಿ ನನಗೆ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ ಎಂದು ಹೇಳಿಕೆ ನೀಡಿದಾಗ ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸುವುದಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದಲ್ಲದೆ ಅದರ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿಯವರನ್ನು ನೇಮಿಸಿತ್ತು.
ಆದರೆ, ಎಸ್ಐಟಿ ತನಿಖೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರ ರಮೇಶ್ ಜಾರಕಿಹೊಳಿಯವರ ಬೆಂಬಲಕ್ಕೆ ನಿಂತುಬಿಟ್ಟಿತು. ತನಿಖಾಧಿಕಾರಿಗಳಿಗೆ ಇದೊಂದು ಹನಿಟ್ರ್ಯಾಪ್ ಪ್ರಕರಣವೆಂದು ಹೇಳಿ ಕೇಸು ಕ್ಲೋಸ್ ಮಾಡುವಂತೆ ಸ್ಪಷ್ಟ ನಿರ್ದೇಶನವನ್ನು ಮೌಖಿಕವಾಗಿ ನೀಡಿತ್ತು. ಮುಂದೆ ಪ್ರಕರಣದ ತನಿಖೆಗೆ ನಿಂತ ವಿಚಾರಣಾಧಿಕಾರಿಗಳು ಜಾರಕಿಹೊಳಿ ಪ್ರಕರಣ ಹನಿಟ್ರ್ಯಾಪ್ ಪ್ರಕರಣವೆಂದೇ ನಿರೂಪಿಸಲು ಟೊಂಕಕಟ್ಟಿ ನಿಂತುಬಿಟ್ಟಿದ್ದರು.
ಆದರೆ, ಇದೇ ಹೊತ್ತಿಗೆ ಸಿಡಿ ಪ್ರಕರಣ ವಕೀಲ ಜಗದೀಶ್ ಮೂಲಕ ರಾಜ್ಯ ಉಚ್ಛನ್ಯಾಯಾಲಯದ ಮುಂದೆ ಬಂದಿತ್ತು. ಪ್ರಕರಣದ ಕುರಿತು ಆಸ್ಥೆ ವಹಿಸಿದ ನ್ಯಾಯಾಲಯ ಈ ಪ್ರಕರಣವನ್ನು ನಿರ್ಭಯಾ ಪ್ರಕರಣದ ಮಾರ್ಗಸೂಚಿಯಂತೆ ತನಿಖೆ ನಡೆಸಿ ತನಗೆ ವರದಿ ನೀಡುವಂತೆ ಸೂಚಿಸಿತ್ತು.
ನ್ಯಾಯಾಲಯದ ನಿರ್ದೇಶನದಿಂದ ವಿಚಲಿತರಾದ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅಂದಿನಿಂದಲೇ ತಮ್ಮನ್ನು ಎಸ್ಐ ಟಿ ಮುಖ್ಯಸ್ಥನ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರಂತೆ. ಆದರೆ, ರಾಜ್ಯ ಸರ್ಕಾರ ಮುಖರ್ಜಿಯವರ ಮನವಿಗೆ ಸ್ಪಂದಿಸಿರಲಿಲ್ಲ.ಇದೇ ಹೊತ್ತಿಗೆ ಸರ್ಕಾರದ ಮೌಖಿಕ ಸೂಚನೆಯಂತೆ ತನಿಖಾಧಿಕಾರಿಗಳು ಸಿ.ಡಿ ಪ್ರಕರಣನ್ನು ಹನಿಟ್ರ್ಯಾಪ್ ಎಂದು ಹೈಕೋರ್ಟ್ಗೆ ವರದಿ ನೀಡಲು ನಿರ್ಧರಿಸುತ್ತಿದ್ದಂತೆ ಸೌಮೇಂದು ಮುಖರ್ಜಿಯವರು ದೀರ್ಘ ರಜೆಯ ಮೇಲೆ ತೆರಳಿಬಿಟ್ಟಿದ್ದಾರೆ. ಇದಕ್ಕೆ ಕಾರಣ ಹೈಕೋಟ್೯ ಎಲ್ಲಿ ವಿಚಾರಣೆಯ ಕುರಿತು ಚಾಟಿ ಬೀಸುತ್ತದೋ ಎನ್ನುವ ಭಯ.
ಒಟ್ಟಾರೆ ರಾಜ್ಯ ಸರ್ಕಾರದ ಒತ್ತಡದಿಂದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ರಜೆಯ ಮೇಲೆ ತೆರಳಿರುವುದು, ಸರ್ಕಾರ ರಚಿಸಿದ ಎಸ್ಐಟಿ ತನ್ನ ಮುಖ್ಯಸ್ಥನ ಗೈರುಹಾಜರಿಯಲ್ಲಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುತ್ತಿರುವುದು ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದ ರೀತಿಗೆ ಕನ್ನಡಿ ಹಿಡಿದಿದೆ.



