Latest

ಮೂರು ಕೋಟಿ ಹಣದೊಂದಿಗೆ ಚೀಟಿ ಲೇಡಿ ಎಸ್ಕೇಪ್

ಚೀಟಿಗೆ ಹಣ ಹಾಕಿ ಕಳೆದುಕೊಂಡ ಅದೆಷ್ಟೋ ಕುಟುಂಬ ಇಂದು ಬೀದಿಗೆ ಬಂದು ನಿಂತಿವೆ. ಸಾಲ ಸೋಲ ಮಾಡಿ ಮನೆಯಲ್ಲಿ ಗೊತ್ತಿಲ್ಲದೆ ಚೀಟಿ ಕಟ್ಟಿ ಕೊನೆಗೆ ಪಂಗನಾಮ ಹಾಕಿಸಿಕೊಂಡಿರೋ ಸಾಕಷ್ಟು ನಿದರ್ಶನಗಳಿವೆ. ಇದೀಗ ಇಂಥದ್ದೆ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದು 3 ಕೋಟಿ ಹಣದೊಂದಿಗೆ ಚೀಟಿ ಲೇಡಿ ಎಸ್ಕೇಪ್ ಆಗಿದ್ದಾಳೆ.

ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಸಾಕಮ್ಮ ಇದೀಗ 60 ಜನರಿಗೆ ಮೋಸ ಮಾಡಿ 3 ಕೋಟಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾಳೆ. ಮೊದಲಿಗೆ ಸಾಕಮ್ಮ ಸರಿಯಾಗಿಯೇ ವ್ಯವಹಾರ ನಡೆಸುತ್ತಿದ್ದರು. ಈಕೆಯ ಮಾತಿಗೆ ಮರುಳಾಗಿ ಸಾಕಷ್ಟು ಮಂದಿ ಚೀಟಿ ಹಾಕೋಕೆ ಮುಂದಾಗಿದ್ದಾರೆ. ಆದ್ರೆ ಯಾವಾಗ ಕೈತುಂಬ ಕಾಸು ಬರೋಕೆ ಶುರುವಾಯ್ತೋ ಸಾಕಮ್ಮನ ಬುದ್ದಿಗೂ ಮಂಕು ಬಡಿದು ಬಿಡ್ತು. ಹೇಗಾದ್ರೂ ಮಾಡಿ ಈ ಎಲ್ಲಾ ಹಣ ನನ್ನದಾಗಬೇಕು ಅನ್ನೋ ದುರಾಲೋಚನೆ ಶುರುವಾಗಿದೆ.

ಮೊದಲಿಗೆ ಸರಿಯಾಗಿಯೇ ಚೀಟಿ ಹಣ ಕೊಡ್ತಿದ್ದ ಸಾಕಮ್ಮ ಬರುತ್ತಾ ಬರುತ್ತಾ ವರಸೆ ಬದಲಿಸೋಕೆ ಶುರುಮಾಡಿದ್ದಾರೆ. ಚೀಟಿ ಹಣ ಕೇಳಲು ಹೋದವ್ರಿಗೆ ಮೊದಲು ಮೊದಲು ಕೆಲವೊಂದು ಸಾಬೂಬು ಹಾಕಿ ಎಸ್ಕೇಪ್ ಆಗಿದ್ದಾಳೆ. ಯಾವಾಗ ಮನೆ ಬಳಿ ಬರುವವರ ಸಂಖ್ಯೆ ಜಾಸ್ತಿ ಆಯ್ತೋ ಆಗ ಸಾಕಮ್ಮ ಎಸ್ಕೇಪ್ ಆಗಿದ್ದಾಳೆ.

ರಾತ್ರೋ ರಾತ್ರಿ ಬೆಂಗಳೂರಿನ ಮನೆ ಮಾರಿ ಗುಡ್ ಬೈ ಹೇಳಿ ಹೊರಟಿದ್ದಾಳೆ. ಅಲ್ಲದೆ ಇನ್ನೊಂದು ಮನೆಯನ್ನ ವೃದ್ಧ ಮಹಿಳೆಗೆ 15 ಲಕ್ಷಕ್ಕೆ ಭೋಗ್ಯಕ್ಕೆ ನೀಡಿದ್ದಳು. ಆ ಮನೆಯನ್ನೂ ವೃದ್ದೆಗೆ ಗೊತ್ತಿಲ್ಲದಂತೆ ಮಾರಾಟ ಮಾಡಿದ್ದಾಳೆ. ಇದೀಗ ವೃದ್ದ ಮಹಿಳೆ ಬೀದಿಗೆ ಬಿದ್ದಿದ್ದು ಕಣ್ಣೀರು ಹಾಕ್ತಿದ್ದಾರೆ.

ಸಾಕಷ್ಟು ಮಂದಿ ಕೂಲಿ, ನಾಲಿ ಮಾಡಿಕೊಂಡು ಗಾರ್ಮೆಂಟ್ಸ್​ಗಳಲ್ಲಿ ಕೆಲಸ ಮಾಡಿಕೊಂಡು ಚೀಟಿ ಹಾಕಿದ್ದರು. ಇದೀಗ ಎಲ್ಲರು ದುಡ್ಡು ಕಳೆದುಕೊಂಡು ತಲೆ ಮೇಲೆ ಕೈಹೊತ್ತುಕೊಂಡು ಕೂತಿದ್ದಾರೆ. ಸದ್ಯ ಪ್ರಕರಣ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button