ಧಾರವಾಡದಲ್ಲಿ ಸಂಸದ ಡಿ ಕೆ ಸುರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಗುಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಅವರ ಸಹೋದರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲಾ ಘಟಕದ ನೇತೃತ್ವದಲ್ಲಿ, ನಗರದ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನ ಸಂಸದ ಡಿಕೆ ಸುರೇಶ ಸೇರಿ ಡಿಕೆಶಿ ಸಹೋದರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಕಳೆದ ದಿನ ರಾಮನಗರದಲ್ಲಿ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್, ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರು ರಾಜಕೀಯ ಏಳೆದ ತಂದು, ಗುಂಡಾ ವರ್ತನೆ ಪ್ರದರ್ಶನ ಮಾಡಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗುಂಡಾ ವರ್ತನೆ ತೋರುತ್ತಿದ್ದಾರೆ. ಹಾಗಾಗಿ ಇವರ ಮೇಲೆ ರಾಜ್ಯಪಾಲರು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ಜಿಲ್ಲಾ ಮುಖಂಡರು, ಕಾಂಗ್ರೆಸ್ ನಾಯಕರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೂಂಡಾ ವರ್ತನೆ ತೋರುವುದು ಬಿಡಬೇಕು. ಒಂದು ವೇಳೆ ಹೀಗೆ ಕಾಂಗ್ರೆಸ್ ನಾಯಕರ ದುರ್ವರ್ತನೆ ಮುಂದವರೆದ್ರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ, ಜೊತೆಗೆ ನಾವ್ಯಾರು ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.



