ವಿಶೇಷಚೇತನ ಮಹಿಳೆಯ ಮೇಲೆ ಹಲ್ಲೆ: ಎಎಸ್ಐ ಅಮಾನತು

ಎಎಸ್ಐ ನಾರಾಯಣ್ ಗೌಡ ವಿಶೇಷಚೇತನ ಮಹಿಳೆ ಮಂಜಮ್ಮ ಎಂಬುವವರನ್ನ ಬೂಟು ಕಾಲಿನಿಂದ ಒದ್ದು, ತಲೆ ಕೂದಲು ಹಿಡಿದು ಎಳೆದಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಎಎಸ್ಐ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು ಇದೀಗ ಎಎಸ್ಐ ನಾರಾಯಣ್ ಅವರನ್ನ ಅಮಾನತ್ತು ಮಾಡಿ ಸಂಚಾರಿ ಪೊಲೀಸ್ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ವಿಶೇಷಚೇತನ ಮಹಿಳೆ ಮಂಜಮ್ಮ ಎಂಬುವವರು ಬಿಬಿಎಂಪಿ ಯಿಂದ ಅನುಮತಿ ಪಡೆದು ಟೌನ್ ಹಾಲ್ ಬಳಿ ಪುಟ್ಟ ಅಂಗಡಿ ಇರಿಸಿಕೊಂಡಿದ್ದರು. ಮಂಜಮ್ಮನ ಅಂಗಡಿ ಪಕ್ಕದಲ್ಲೇ ವಾಹನಗಳನ್ನ ಪಾರ್ಕ್ ಮಾಡುತ್ತಿದ್ದ ಜನರು ಇದಕ್ಕಾಗಿ ಮಂಜುಮ್ಮ ಅವರಿಗೆ 5-10 ರೂಪಾಯಿಗಳನ್ನ ನೀಡುತ್ತಿದ್ದರಂತೆ. ಇದ್ರಿಂದ ನಿತ್ಯ ಟ್ರಾಫಿಕ್ ಉಂಟಾಗುತ್ತಿದ್ದು ವಾಹನಗಳನ್ನ ತೆಗೆಸುವಂತೆ ಪೊಲೀಸರು ಸೂಚನೆ ನೀಡಿದ್ದರಂತೆ.
ಈ ಹಿಂದೆ ಹಲವು ಬಾರಿ ಟೋಯಿಂಗ್ ವಾಹನದ ಮೇಲೆ ಮಂಜಮ್ಮ ಕಲ್ಲು ಎಸೆದಿರುವ ಆರೋಪ ಕೇಳಿ ಬಂದಿದ್ದು ಜನವರಿ 24ರಂದು ಬಂದಿದ್ದ ಟೋಯಿಂಗ್ ವಾಹನಕ್ಕೆ ಕಲ್ಲು ಎಸೆದಿದ್ದಾರೆ. ಈ ವೇಳೆ ಎಎಸ್ಐ ಕೋಪಕೊಂಡು ಮಹಿಳೆಯನ್ನ ಬೂಟು ಕಾಲಿನಿಂದ ಒದ್ದು, ಕೂದಲ್ಲನ್ನ ಎಳೆದಾಡಿದ್ದಾರೆ. ಬಳಿಕ ಮಹಿಳೆ ತಪ್ಪಾಯ್ತು ಎಂದು ಕ್ಷಮೆ ಕೇಳಿಕ್ರೂ ಎಎಸ್ಐ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಧಿಕಾರಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿತ್ತು.
ಟೋಯಿಂಗ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಎಎಸ್ಐ ಎಸ್ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿದ್ರು. ಇದೀಗ ಮಂಜಮ್ಮರನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಘಟನೆ ಸಂಬಂಧ ಪ್ರತಿಕ್ರಿಯಿಸಿರೋ ಗೃಹ ಸಚಿವ ಆರಗ ಜ್ಷಾನೇಂದ್ರ ತನಿಖೆಗೆ ಆದೇಶಿಸಿದ್ದಾರೆ. ಒಬ್ಬ ಅಮಾಯಕ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಅವಾಚ್ಯ ಶಬ್ದಗಳನ್ನ ಬಳಸಿದ್ದಲ್ಲದೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಿದ್ದೇನೆ. ಯಾರೇ ಆದರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇದಕ್ಕೆ ಪೊಲೀಸರು ಹೊರತಾಗಿಲ್ಲ ಎಂದಿದ್ದಾರೆ.
